- ದೇಶದ 100 ನಗರಗಳಿಗೆ ಅಮೆಜಾನ್ ನೌ ವಿಸ್ತರಣೆ
- ಕರ್ನಾಟಕದ ಮೈಸೂರು, ಮಂಗಳೂರಿನಲ್ಲಿ ಆರಂಭ
- 16,000ಕ್ಕೂ ಹೆಚ್ಚು ರೈತರಿಗೂ ಲಾಭ, ರೈತರಿಂದ ಖರೀದಿಸಿದ ವಸ್ತು ಗ್ರಾಹಕರಿಗೆ ನೇರ ಮಾರಾಟ
ಬೆಂಗಳೂರು: ಭಾರತದ 'ಕ್ವಿಕ್ ಕಾಮರ್ಸ್'ಮಾರುಕಟ್ಟೆಯಲ್ಲಿ ದಿನ ದಿನಕ್ಕೂ ಪೈಪೋಟಿ ಜೋರಾಗಿದ್ದು, ಈ ವಲಯದಲ್ಲಿ ಪಾರುಪತ್ಯ ಸಾಧಿಸಲು ಇ-ಕಾಮರ್ಸ್ ದೈತ್ಯ 'ಅಮೆಜಾನ್' ಹೆಜ್ಜೆಯಿಟ್ಟಿದೆ. ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸುವ ತನ್ನ ಮಹತ್ವಾಕಾಂಕ್ಷೆಯ 'ಅಮೆಜಾನ್ ನೌ' (Amazon Now)ಸೇವೆಯನ್ನು ಈಗಾಗಲೇ ಆರಂಭಿಸಿರುವ ಕಂಪನಿ ಇದೀಗ ಈ ಸೇವೆಯನ್ನು ದೇಶದ 100 ನಗರಗಳಿಗೆ ವಿಸ್ತರಿಸುವುದಾಗಿ ಹೇಳಿದೆ.
2,800 ಕೋಟಿ ರೂ. ಹೂಡಿಕೆ
ತನ್ನ ಕಾರ್ಯಾಚರಣಾ ಜಾಲವನ್ನು ಬಲಪಡಿಸಲು ಅಮೆಜಾನ್ ಬರೋಬ್ಬರಿ 2,800 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ಬೃಹತ್ ಮೊತ್ತವನ್ನು ಕೇವಲ ವ್ಯಾಪಾರ ವಿಸ್ತರಣೆಗೆ ಮಾತ್ರವಲ್ಲದೆ, ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮಕ್ಕೂ ವಿನಿಯೋಗಿಸಲು ಅಮೆಜಾನ್ ನಿರ್ಧರಿಸಿದೆ. ಈ ಮೂಲಕ ಭಾರತದ ಅತ್ಯಂತ ಸುರಕ್ಷಿತ, ವೇಗದ ಮತ್ತು ವಿಶ್ವಾಸಾರ್ಹ ಕಾರ್ಯಾಚರಣಾ ಜಾಲವಾಗಿ ಹೊರಹೊಮ್ಮುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ.
ಮಂಗಳೂರು, ಮೈಸೂರಿನತ್ತ ಅಮೆಜಾನ್ ಚಿತ್ತ!
1,000 'ಎಂಎಫ್‌ಸಿ'ಗಳ ಸ್ಥಾಪನೆ
ಈಗಾಗಲೇ ಬೆಂಗಳೂರು, ಮುಂಬೈ ಮತ್ತು ದೆಹಲಿ-ಎನ್‌ಸಿಆರ್‌ನಂತಹ ಮಹಾನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ 'ಅಮೆಜಾನ್ ನೌ', ಇದೀಗ ಕರ್ನಾಟಕದ ಪ್ರಮುಖ ವಾಣಿಜ್ಯ ನಗರ ಮಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿಗೂ ಲಗ್ಗೆ ಇಡುತ್ತಿದೆ.
16,000 ರೈತರಿಗೆ ಲಾಭ
'ಅಮೆಜಾನ್ ನೌ' ಸೇವೆಯ ಅಡಿಯಲ್ಲಿ ಗ್ರಾಹಕರಿಗೆ ದಿನಸಿ (ಹಣ್ಣು, ತರಕಾರಿ, ಫ್ರೋಜನ್ ಫುಡ್), ವೈಯಕ್ತಿಕ ಆರೈಕೆ ಉತ್ಪನ್ನಗಳು, ಫ್ಯಾಷನ್ ಮತ್ತು ಸೌಂದರ್ಯವರ್ಧಕಗಳು, ಸಣ್ಣ ಗೃಹೋಪಯೋಗಿ ವಸ್ತುಗಳು, ಮಕ್ಕಳ ಉತ್ಪನ್ನಗಳು, ಸಾಕುಪ್ರಾಣಿಗಳ ಆಹಾರ ಮತ್ತು ಆರೋಗ್ಯ ಸಪ್ಲಿಮೆಂಟ್‌ಗಳು ಕೆಲವೇ ನಿಮಿಷಗಳಲ್ಲಿ ಡೆಲಿವರಿಯಾಗಲಿವೆ.
ಈ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಮಾತ್ರವಲ್ಲ 16,000ಕ್ಕೂ ಹೆಚ್ಚು ರೈತರಿಗೂ ಲಾಭವಾಗಲಿದ್ದು, ಅಮೆಜಾನ್‌ನ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ಲಾಭವನ್ನು ಇವರು ಪಡೆಯಲಿದ್ದಾರೆ. ಇವರು ಬೆಳೆದ ತಾಜಾ ಕೃಷಿ ಉತ್ಪನ್ನಗಳು ಮಾರಾಟಗಾರರ ಮೂಲಕ ನೇರವಾಗಿ ಮತ್ತು ಅತಿ ವೇಗವಾಗಿ ಗ್ರಾಹಕರ ಕೈಸೇರಲಿವೆ.
ಅಮೆಜಾನ್ ಇದಕ್ಕಾಗಿ ಬೃಹತ್ ಜಾಲವನ್ನು ನಿರ್ಮಿಸಿದ್ದು ಸಾವಿರಾರು ದಿನಬಳಕೆ ವಸ್ತುಗಳು ನಿಮಿಷಗಳಲ್ಲಿ ಡೆಲಿವರಿಯಾಗಲಿದ್ದರೆ, 10 ಲಕ್ಷಕ್ಕೂ ಹೆಚ್ಚು ವಸ್ತುಗಳು ಬುಕ್ ಮಾಡಿದ ಅದೇ ದಿನ ಹಾಗೂ 40 ಲಕ್ಷಕ್ಕೂ ಹೆಚ್ಚು ವಸ್ತುಗಳು ಮರುದಿನ ಗ್ರಾಹಕರ ಕೈ ಸೇರಲಿವೆ.
ನಿಮ್ಮ ಪಿನ್‌ಕೋಡ್‌ನಲ್ಲಿ ಸೇವೆ ಲಭ್ಯವಿದೆಯೇ? ಚೆಕ್ ಮಾಡುವುದು ಹೇಗೆ?
ತಾವಿರುವ ಪ್ರದೇಶದ ಪಿನ್‌ಕೋಡ್‌ನಲ್ಲಿ 'ಅಮೆಜಾನ್ ನೌ' ಕ್ವಿಕ್ ಡೆಲಿವರಿ ಸೇವೆ ಲಭ್ಯವಿದೆಯೇ ಎಂಬುದನ್ನು ಪರೀಕ್ಷಿಸಲು, ಗ್ರಾಹಕರು ಅಮೆಜಾನ್ ಆ್ಯಪ್ ತೆರೆದು ಮುಖಪುಟದ ಮೇಲ್ಭಾಗದ ಬ್ಯಾನರ್‌ನಲ್ಲಿರುವ ಸಿಡಿಲಿನ ಅಥವಾ Lightning ಆಕಾರದ 'Now' ಐಕಾನ್ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬಹುದು, (ಏಜೆನ್ಸೀಸ್).