ಬೆಂಗಳೂರು: ವಾಹನ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki)ತನ್ನ ಜನಪ್ರಿಯ ವಿನ್ಯಾಸ ಸ್ಪರ್ಧೆಯ 2ನೇ ಆವೃತ್ತಿಯಾದ 'ಡಿಸೈನ್-ಎಕ್ಸ್‌ಥಾನ್ 2026' ಅನ್ನು ಅಧಿಕೃತವಾಗಿ ಘೋಷಿಸಿದೆ.
ಕಳೆದ ವರ್ಷ ನಡೆದ ಮೊದಲ ಆವೃತ್ತಿಯ ಅಭೂತಪೂರ್ವ ಯಶಸ್ಸಿನ ನಂತರ, ಭಾರತದಲ್ಲಿರುವ ವಿವಿಧ ಡಿಸೈನ್ ಇನ್‌ಸ್ಟಿಟ್ಯೂಟ್‌ಗಳ ವಿದ್ಯಾರ್ಥಿಗಳನ್ನು ಈ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಭವಿಷ್ಯದ ವಾಹನಗಳ ವಿನ್ಯಾಸ ಹೇಗಿರಬೇಕು ಎಂಬ ತಮ್ಮ ಕಲ್ಪನೆಯನ್ನು ಸ್ಪರ್ಧೆಯಲ್ಲಿ ಮಂಡಿಸಬಹುದಾಗಿದೆ.
ಏನಿದು ಸ್ಪರ್ಧೆಯ ಥೀಮ್?
ಈ ಬಾರಿಯ ಸ್ಪರ್ಧೆಗೆ ಅತ್ಯಂತ ಕುತೂಹಲಕಾರಿ ಥೀಮ್ ನೀಡಲಾಗಿದೆ. "2036ನೇ ಇಸವಿಯಲ್ಲಿ 'ಜೆನ್-ಝಡ್' ಮತ್ತು 'ಆಲ್ಫಾ' ಪೀಳಿಗೆಯ ಯುವಜನರು ಹೊಂದಲು ಬಯಸುವ ಐಕಾನಿಕ್ ವಾಹನ ವಿನ್ಯಾ,” ಎಂಬುದು ಈ ಬಾರಿಯ ಸ್ಪರ್ಧೆಯ ವಿಷಯವಾಗಿದೆ.
2035 ರಿಂದ 2040ರ ಕಾಲಘಟ್ಟಕ್ಕೆ ತಕ್ಕಂತೆ ವಾಹನಗಳು ಹೇಗಿರಬೇಕು, ಇಂದಿನ ಯುವಜನರ ಜೀವನಶೈಲಿಗೆ ಅದು ಹೇಗೆ ಹೊಂದಿಕೊಳ್ಳುತ್ತದೆ, ಪರಿಸರ ಸ್ನೇಹಿ ಅಂಶಗಳನ್ನು ಹೇಗೆ ಅಳವಡಿಸಲಾಗಿದೆ ಹಾಗೂ ವಾಹನದ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ನಡುವೆ ಹೇಗೆ ಕೊಂಡಿ ಬೆಸೆಯಲಾಗಿದೆ ಎಂಬುದರ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ವಿಜೇತರಿಗೆ ಇದೆ ಬಂಪರ್ ಬಹುಮಾನ
ವಿಜೇತರಿಗೆ 4.5 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ಅಲ್ಲದೆ, ಟಾಪ್ 3 ತಂಡಗಳಿಗೆ ಮಾರುತಿ ಸುಜುಕಿ ವಿನ್ಯಾಸ ತಂಡದೊಂದಿಗೆ 6 ತಿಂಗಳ ಕಾಲ ಕೆಲಸ ಮಾಡುವ (ಇಂಟರ್ನ್‌ಶಿಪ್) ಅವಕಾಶ ಸಿಗಲಿದೆ.
4 ರಿಂದ 10ನೇ ಸ್ಥಾನ ಪಡೆಯುವ ತಂಡಗಳಿಗೂ ಪ್ರಶಂಸನಾ ಪತ್ರ ಹಾಗೂ ಮುಂದೆ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗುತ್ತದೆ. ಇದು ಅವರ ಭವಿಷ್ಯದ ವೃತ್ತಿಜೀವನಕ್ಕೆ ದೊಡ್ಡ ಮೆಟ್ಟಿಲಾಗಲಿದೆ.
ಅರ್ಜಿ ಸಲ್ಲಿಕೆ ಹೇಗೆ?
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು ಜುಲೈ 13, 2026 ರೊಳಗೆ ಮಾರುತಿ ಸುಜುಕಿ ಡಿಸೈನ್-ಎಕ್ಸ್-ಥಾನ್‌ನ ಅಧಿಕೃತ ಲಿಂಕ್
ಮೂಲಕ ಅರ್ಜಿ ಸಲ್ಲಿಸಬಹುದು. ಬದಲಾಗುತ್ತಿರುವ ಗ್ರಾಹಕರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಬೆಳೆಸಲು ಮಾರುತಿ ಸುಜುಕಿ ಪ್ರತಿವರ್ಷ ಈ ಸ್ಪರ್ಧೆಯನ್ನು ಆಯೋಜಿಸುತ್ತದೆ.