ಮೀರಾ ಜಾಸ್ಮಿನ್ ಅವರ ಚಿತ್ರದ ಹಾಡಿನ ದೃಶ್ಯ
- ಅಂದು ಜೂನಿಯರ್ ಆರ್ಟಿಸ್ಟ್ ಇಂದು ಸೌತ್ ಚಿತ್ರರಂಗದ ಬಹುಬೇಡಿಕೆಯ ನಟಿ
- ಒಳ್ಳೆಯ ಕಥಾಹಂದರದ ಚಿತ್ರಗಳ ಆಯ್ಕೆಯಿಂದಲೇ ಈಕೆ ಸಿಕ್ಕಾಪಟ್ಟೆ ಫೇಮಸ್
- ಇಂದು 4000 ಕೋಟಿ ರೂ. ಬಿಗ್ ಬಜೆಟ್ ಚಿತ್ರಕ್ಕೆ ನಾಯಕಿ
ಚೆನ್ನೈ: ಸಿಂಪಲ್ ಲುಕ್, ಮೋಡಿ ಮಾಡುವ ಅಭಿನಯ ಅಷ್ಟೇ! ಸರಳವಾಗಿರುವ ಹೆಣ್ಣು ಮಕ್ಕಳನ್ನು ಇಷ್ಟಪಡುವ ಹುಡುಗರ ಎದೆಬಡಿತವನ್ನು ಹೆಚ್ಚಿಸುವ ನಟಿ ಈಕೆ. ಸೌತ್ ಸಿನಿಮಾಗಳಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸಿ, ಇಂದು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಚ್ಚಿನ ಹಾಗೂ ಚಿತ್ರೋದ್ಯಮದಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದಿರುವ ಈ ಬ್ಯೂಟಿ ಅಂದಿನ ಸ್ಟಾರ್ ಹೀರೋಯಿನ್ ಚಿತ್ರಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕುಣಿದ ದಿನಗಳ ಬಗ್ಗೆ ಇಲ್ಲಿ ಮೆಲುಕು ಹಾಕೋಣ ಬನ್ನಿ.
'ಪ್ರೇಮಮ್' ಮಲರ್
ಈ ನಟಿಯ ಹೆಸರು ತೆಗೆದರೆ ಸಾಕು, ಕೇವಲ ಅವರ ಸೂಪರ್ ಹಿಟ್ ಸಿನಿಮಾಗಳ ಬಗ್ಗೆ ಅಲ್ಲದೇ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಜನ ಚರ್ಚಿಸುತ್ತಾರೆ. ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಕಥಾಹಂದರದ ಚಿತ್ರಗಳ ಆಯ್ಕೆಗೆ ಈಕೆ ಸಿಕ್ಕಾಪಟ್ಟೆ ಫೇಮಸ್. ಜೊತೆಗೆ, ಹಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ನಿರಾಕರಿಸಿ ವಿವಾದಗಳಿಗೂ ತುತ್ತಾಗಿದ್ದಾರೆ. ಅಲ್ಲದೆ, ಜನರ ನಂಬಿಕೆಗೆ ದ್ರೋಹ ಮಾಡುವ ಜಾಹೀರಾತುಗಳನ್ನು ನಿರಾಕರಿಸಿ ಜನರ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ.
ಬಹುಬೇಡಿಕೆಯ ಸ್ಟಾರ್ ನಟಿ
ತಮಿಳಿನ ಸ್ಟಾರ್ ನಿರ್ದೇಶಕ ಮಣಿರತ್ನಂ ಅವರಂತಹ ಬಹುಬೇಡಿಕೆಯ ನಿರ್ದೇಶಕರು ಸಾಯಿ ಪಲ್ಲವಿ ಜತೆ ಸಿನಿಮಾ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆಂದರೆ ನಟಿಯ ಪ್ರತಿಭೆ ಎಂಥದ್ದು ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬಹುದು. ಇತ್ತೀಚೆಗೆ, ಶಿವಕಾರ್ತಿಕೇಯನ್ ಜತೆಗೆ 'ಅಮರನ್' ಚಿತ್ರದಲ್ಲಿ ನಟಿಸಿದ ಸಾಯಿ ಪಲ್ಲವಿ ಬ್ಲಾಕ್ಬಸ್ಟರ್ ಹಿಟ್ ಕಂಡರು. ಅದರಲ್ಲೂ, ಇಡೀ ಚಿತ್ರದಲ್ಲಿ ನಾಯಕನಿಗಿಂತ ಹೆಚ್ಚು ಗಮನ ಸೆಳೆಯುವುದೇ ನಾಯಕಿ ಎಂಬುದು ಮತ್ತೊಂದು ವಿಶೇಷ. ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಸಾಯಿ ಪಲ್ಲವಿ, ಅಂದು ಸ್ಟಾರ್ ನಟಿ ಮೀರಾ ಜಾಸ್ಮಿನ್ ಅವರ ಹಿಂದೆ ಜೂನಿಯರ್ ಆರ್ಟಿಸ್ಟ್ ಆಗಿ ಅವಕಾಶದ ಹಿಂದೆ ಓಡಿ, ಇಂದು ಬೆಳೆದು ನಿಂತಿರುವ ಪರಿ ನಿಜಕ್ಕೂ ಅದ್ಭುತವೇ.
ಜೂನಿಯರ್ ಕಲಾವಿದೆ
‘ಕಸ್ತೂರಿಮಾನ್’ ತಮಿಳು ಡಬ್ ಚಿತ್ರದ ಹಾಡೊಂದರಲ್ಲಿ ನಾಯಕಿ ಮೀರಾ ಜಾಸ್ಮಿನ್ ಬೆನ್ನ ಹಿಂದೆ ಹೆಜ್ಜೆ ಹಾಕುತ್ತಿರುವ ಜೂನಿಯರ್ ಕಲಾವಿದರಲ್ಲಿ ಸಾಯಿಯೂ ಒಬ್ಬರು. ನಟ ಜಯಂ ರವಿ ಅಭಿನಯದ ‘ಧಾಮ್ ಧೂಮ್’ ಸಿನಿಮಾದಲ್ಲೂ ಇದೇ ರೀತಿಯ ದೃಶ್ಯಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಘಟನೆ ನಡೆದದ್ದು ಸಾಯಿ ಪಲ್ಲವಿ ಆರನೇ ತರಗತಿಯಲ್ಲಿದ್ದಾಗ ಎನ್ನಲಾಗಿದೆ. ಸಾಯಿ ಮತ್ತು ಆಕೆಯ ಸ್ನೇಹಿತರು ಕ್ಲಾಸ್ ಮುಗಿಸಿ, ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡಲು ಹೋಗುತ್ತಿದ್ದರಂತೆ. ಬಾಲ್ಯದಲ್ಲಿ ಅವರ ತಾಯಿ, ಐಶ್ವರ್ಯಾ ರೈ ಮತ್ತು ಮಾಧುರಿ ದೀಕ್ಷಿತ್ ಅವರ ಡ್ಯಾನ್ಸ್ ವಿಡಿಯೋಗಳನ್ನು ತೋರಿಸಿ ನೃತ್ಯ ಕಲಿಸುತ್ತಿದ್ದರಂತೆ. ಹೀಗೆ, ಸಮಯ ಮತ್ತು ಅವಕಾಶಗಳು ಸಿಕ್ಕಾಗ ಉಪಯೋಗಿಸಿಕೊಂಡ ಪಲ್ಲವಿ, ಇಂದು 4000 ಬಜೆಟ್ ಚಿತ್ರದ 'ರಾಮಾಯಣ'ದಲ್ಲಿ ಸೀತೆಯಾಗಿ ಪ್ರೇಕ್ಷಕರ ಎದುರು ಹಾಜರಾಗಲು ಸಜ್ಜಾಗಿದ್ದಾರೆ.
ಪ್ರಸ್ತುತ ಭಾರತದ ಅತ್ಯಂತ ದುಬಾರಿ ಚಿತ್ರ ಎನ್ನಲಾದ ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಹಿಂದಿ ಚಿತ್ರದಲ್ಲಿ ಸೀತಾ ಮಾತೆಯ ಪಾತ್ರವನ್ನು ಸಾಯಿ ಪಲ್ಲವಿ ನಿಭಾಯಿಸಿದ್ದಾರೆ. ಈ ಪಾತ್ರವು ಪ್ರಶಂಸೆ ಮತ್ತು ಟೀಕೆ ಎರಡಕ್ಕೂ ಗುರಿಯಾಗಿದೆ. ಕೆಲವರು, ಸಾಯಿ ಅವರನ್ನು ಲುಕ್ ಕಂಡು ಮೆಚ್ಚಿ, ಹೊಗಳಿದರೆ, ಈಕೆ ಸೀತಾ ಪಾತ್ರಕ್ಕೆ ಸರಿ ಹೊಂದುವುದಿಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಇದೆಲ್ಲದರ ನಡುವೆ ಚಿತ್ರ ತೆರೆಗೆ ಅಪ್ಪಳಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ,(ಏಜೆನ್ಸೀಸ್).