ಯಾರೂ ನನ್ನನ್ನು ತಪ್ಪು ತಿಳಿಯಬೇಡಿ ಎಂದು ಮನವಿ ಮಾಡುತ್ತಾ ತಮ್ಮ ಮನದ ನೋವನ್ನು ಬಿಚ್ಚಿಟ್ಟ ಶ್ರುತಿ ಹಾಸನ್! Shruti Haasan
- ಆರೋಗ್ಯದ ಕಾರಣದಿಂದ ಮುದ್ದಿನ ಬೆಕ್ಕಿನ ಮರಿಯನ್ನು ದೂರ ಮಾಡಿದ ನಟಿ ಶ್ರುತಿ ಹಾಸನ್
- ಬೆಕ್ಕಿನ ತುಪ್ಪಳ ಮತ್ತು ಜೊಲ್ಲುರಸದಿಂದ ತೀವ್ರ ಅಲರ್ಜಿ ಸಮಸ್ಯೆ ಎದುರಾಗಿದೆ ಎಂದು ಸ್ಪಷ್ಟನೆ
- ಅಲರ್ಜಿ ನಿಯಂತ್ರಿಸಲು ಹತ್ತು ಹಲವು ಪ್ರಯತ್ನ ಮಾಡಿದರೂ ಯಾವುದು ಫಲಕಾರಿಯಾಗಲಿಲ್ಲ
- ಅನಿವಾರ್ಯ ಪರಿಸ್ಥಿತಿಯಲ್ಲಿ ಅಸ್ಲಾನ್ ಅನ್ನು ಅಗಲುವ ಕಠಿಣ ನಿರ್ಧಾರ ಕೈಗೊಂಡ ಶ್ರುತಿ ಹಾಸನ್
- ಪ್ರಾಣಿ ಪ್ರಿಯರಿಗೆ ಬೆಕ್ಕನ್ನು ಒಪ್ಪಿಸಲು ಸ್ನೇಹಿತರೊಂದಿಗೆ ಪ್ರಯತ್ನಿಸುತ್ತಿರುವುದಾಗಿ ಮಾತು
ಚೆನ್ನೈ: ಪ್ರಖ್ಯಾತ ಬಹುಭಾಷಾ ನಟಿ ಹಾಗೂ ಗಾಯಕಿ ಶ್ರುತಿ ಹಾಸನ್ ( Shruti Haasan ) ತಮ್ಮ ಅಚ್ಚುಮೆಚ್ಚಿನ ಪರ್ಷಿಯನ್ ಬೆಕ್ಕಿನ ಮರಿ 'ಅಸ್ಲಾನ್' ಅನ್ನು ಆರೋಗ್ಯದ ಕಾರಣದಿಂದ ದೂರ ಮಾಡಬೇಕಾಗಿ ಬಂದಿರುವುದು ತಮ್ಮ ಜೀವನದ ಅತ್ಯಂತ ಕಷ್ಟಕರ ನಿರ್ಧಾರಗಳಲ್ಲಿ ಒಂದೆಂದು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.
ಮೂರು ತಿಂಗಳ ಹಿಂದಷ್ಟೇ ಅಸ್ಲಾನ್ ಅನ್ನು ದತ್ತು ಪಡೆದಿದ್ದೆ. ಆದರೆ ಮರಿ ಮನೆಗೆ ಬಂದ ಎರಡು ದಿನಗಳಲ್ಲೇ ನನಗೆ ತೀವ್ರ ಅಲರ್ಜಿ ಕಾಣಿಸಿಕೊಂಡಿತು. ಆರಂಭದಲ್ಲಿ ಮಾವಿನಹಣ್ಣು ಹೆಚ್ಚಾಗಿ ತಿಂದಿದ್ದರಿಂದ ಈ ರೀತಿ ಆಗಿರಬಹುದು ಎಂದು ಭಾವಿಸಿದ್ದೆ. ಆದರೆಮ, ವೈದ್ಯರನ್ನು ಭೇಟಿ ಮಾಡಿದಾಗ ಬೆಕ್ಕಿನ ತುಪ್ಪಳ ಮತ್ತು ಜೊಲ್ಲುರಸವೇ ಅಲರ್ಜಿಗೆ ಮೂಲ ಕಾರಣ ಎಂಬುದು ಅರಿವಿಗೆ ಬಂದಿತು ಎಂದು ಶ್ರುತಿ ತಿಳಿಸಿದ್ದಾರೆ.
ಅಲರ್ಜಿ ನಿಯಂತ್ರಿಸಲು ಏರ್ ಪ್ಯೂರಿಫೈಯರ್ ಬಳಕೆ, ಬೆಕ್ಕಿನ ತುಪ್ಪಳ ಕತ್ತರಿಸುವುದು ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವಂತಹ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ, ಯಾವುದೇ ಕ್ರಮಗಳು ಫಲಕಾರಿಯಾಗಲಿಲ್ಲ. ಅಲರ್ಜಿ ಔಷಧಗಳು ಕೂಡ ಕೆಲಸ ಮಾಡದಿದ್ದಾಗ ಅದು ನನ್ನ ಚರ್ಮ, ಕೆಲಸ ಮತ್ತು ಮನಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಲು ಶುರುವಾಯಿತು ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಚೆನ್ನೈನಿಂದ ಮುಂಬೈಗೆ ವಾಪಸಾದ ಬಳಿಕ ಈ ಅಲರ್ಜಿ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತು. ಅನಿವಾರ್ಯ ಪರಿಸ್ಥಿತಿಯಲ್ಲಿ ಅಸ್ಲಾನ್ ಅನ್ನು ಅಗಲುವ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸ್ಪಷ್ಟಪಡಿಸಿರುವ ನಟಿ, ಸದ್ಯ ಆ ಬೆಕ್ಕಿನ ಮರಿಯು ಅದರ ಹಳೆಯ ಮಾಲೀಕರ ಬಳಿಯಿದ್ದು, ಪ್ರಾಣಿ ಪ್ರಿಯರ ಕೈಗೆ ಒಪ್ಪಿಸಲು ಸ್ನೇಹಿತರೊಂದಿಗೆ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಾಣಿಗಳಿಗೆ ಉತ್ತಮ ಆಶ್ರಯ ಕಲ್ಪಿಸುವುದು ದೊಡ್ಡ ಪುಣ್ಯದ ಕೆಲಸವಾಗಿದ್ದು, ಇದನ್ನು ಯಾರೂ ಕೂಡ ದತ್ತು ಸ್ವೀಕಾರದ ವೈಫಲ್ಯವಾಗಿ ನೋಡಬಾರದು ಎಂದು ಶ್ರುತಿ ಹಾಸನ್ ಮನವಿ ಮಾಡಿದ್ದಾರೆ. ಮುದ್ದಿನ ಪ್ರಾಣಿಯೊಂದನ್ನು ಕಳೆದುಕೊಳ್ಳುವಾಗ ಉಂಟಾಗುವ ಅಪರಾಧ ಪ್ರಜ್ಞೆ ಮತ್ತು ನೋವನ್ನು ಎದುರಿಸುತ್ತಿರುವುದಾಗಿ ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ, (ಏಜೆನ್ಸೀಸ್).