ಸಿನಿಮಾದಿಂದ ದೂರ ಉಳಿಯಲು ನಟಿ ತ್ರಿಷಾ ನಿರ್ಧಾರ? ಹಾಗಾದರೆ ಸೌತ್​ ಬ್ಯೂಟಿಯ ಮುಂದಿನ ನಡೆ ಏನು? Trisha Krishan  
ಕಾಲಿವುಡ್

ಸಿನಿಮಾದಿಂದ ದೂರ ಉಳಿಯಲು ನಟಿ ತ್ರಿಷಾ ನಿರ್ಧಾರ? ಹಾಗಾದರೆ ಸೌತ್​ ಬ್ಯೂಟಿಯ ಮುಂದಿನ ನಡೆ ಏನು? Trisha Krishan

ಪ್ರಮುಖ ಮುಖ್ಯಾಂಶಗಳು

  • ನಟನೆಗೆ ತಾತ್ಕಾಲಿಕ ವಿರಾಮ ಹಾಕಲಿದ್ದಾರಂತೆ ನಟಿ ತ್ರಿಶಾ ಕೃಷ್ಣನ್?
  • ಸಿನಿಮಾ ಪ್ರೊಡಕ್ಷನ್ ಹಾಗೂ ರಾಜಕೀಯ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಗುಸುಗುಸು
  • ಮುಂಬರುವ ದಿನಗಳಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಸ್ಟಾರ್ ನಟಿ ತ್ರಿಷಾ?
  • ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳು ಮುಗಿಯುತ್ತಿದ್ದಂತೆ ಸಿನಿಮಾಗೆ ಬ್ರೇಕ್ ಹೇಳಲಿದ್ದಾರಂತೆ ಸೌತ್​ ಬ್ಯೂಟಿ?
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ( Trisha Krishan ) ಸದ್ಯದಲ್ಲೇ ನಟನೆಯಿಂದ ತಾತ್ಕಾಲಿಕ ವಿರಾಮ ಪಡೆಯಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ವಲಯದಲ್ಲಿ ಸಂಚಲನ ಮೂಡಿಸಿದೆ. ಮೂಲಗಳ ಪ್ರಕಾರ, ತಾವು ಈಗಾಗಲೇ ಒಪ್ಪಿಕೊಂಡಿರುವ ಎಲ್ಲಾ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿದ ಬಳಿಕ ತ್ರಿಷಾ ಚಿತ್ರರಂಗದಿಂದ ಸ್ವಲ್ಪ ದಿನ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.
ಅಲ್ಲದೆ, ತ್ರಿಷಾ ಶೀಘ್ರದಲ್ಲೇ ಚಲನಚಿತ್ರ ನಿರ್ಮಾಣ (ಪ್ರೊಡಕ್ಷನ್) ಕ್ಷೇತ್ರಕ್ಕೆ ಕಾಲಿಡಲಿದ್ದು, ಬಳಿಕ ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಸಿನಿವಲಯದಲ್ಲಿ ಜೋರಾಗಿ ಹರಿದಾಡುತ್ತಿದೆ. ಈ ಬಗ್ಗೆ ಅಧಿಕೃತ ಮಾಹತಿ ಇಲ್ಲದಿದ್ದರೂ, ಇತ್ತೀಚಿನ ಬೆಳವಣಿಗೆಗಳು ಈ ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿ ನೀಡಿವೆ.
ಇತ್ತೀಚೆಗೆ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರದ ಉದ್ಘಾಟನಾ ಸಮಾರಂಭ ಹಾಗೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳಲ್ಲಿ ತ್ರಿಷಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ ತಾಯಿ ಉಮಾ ಕೃಷ್ಣನ್ ಅವರೊಂದಿಗೆ ಆಗಮಿಸಿದ್ದ ತ್ರಿಷಾ, ವೇದಿಕೆಯ ಮುಂಚೂಣಿ ಸಾಲಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಪೋಷಕರಾದ ಎಸ್.ಎ. ಚಂದ್ರಶೇಖರ್ ಮತ್ತು ಶೋಭಾ ಚಂದ್ರಶೇಖರ್ ಅವರೊಂದಿಗೆ ಆಸೀನರಾಗಿದ್ದರು.
ಅಷ್ಟೇ ಅಲ್ಲದೆ, ರಾಷ್ಟ್ರಧ್ವಜಾರೋಹಣ ನೆರವೇರಿಸಿ ತೆರೆದ ಜೀಪಿನಲ್ಲಿ ತೆರಳುತ್ತಿದ್ದ ಮುಖ್ಯಮಂತ್ರಿ ವಿಜಯ್ ಅವರಿಗೆ ತ್ರಿಷಾ ಸೆಲ್ಯೂಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ವಿವಿಐಪಿ (VVIP) ಅತಿಥಿಯಾಗಿ ನಟಿ ಈ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವುದು ರಾಜಕೀಯ ಪ್ರವೇಶದ ಮುನ್ಸೂಚನೆ ಎಂದು ಚರ್ಚಿಸಲಾಗುತ್ತಿದೆ.
ಮತ್ತೊಂದೆಡೆ, ವಿಜಯ್ ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ಅವರು ತಮ್ಮ ವಿಚ್ಛೇದನ ಅರ್ಜಿಯನ್ನು ಇತ್ತೀಚೆಗೆ ವಾಪಸ್ ಪಡೆದಿರುವ ವರದಿಗಳು ಬಂದಿವೆ. ವಿಜಯ್ ತಾಯಿಯ ಮಧ್ಯಸ್ಥಿಕೆಯಿಂದ ಈ ಬೆಳವಣಿಗೆ ನಡೆದಿದೆ ಎನ್ನಲಾಗುತ್ತಿದ್ದು, ಇದರ ನಡುವೆಯೂ ತ್ರಿಷಾ ತಮಿಳುನಾಡು ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ VVIP ಆಗಿ ಕಾಣಿಸಿಕೊಳ್ಳುತ್ತಿರುವುದು ಸದ್ಯ ಎಲ್ಲಡೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ, (ಏಜೆನ್ಸೀಸ್​).