ಕೋತಿಯೊಂದಿಗಿರುವ ವಿಡಿಯೋ ಶೇರ್​ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ ಚಿಯಾನ್ ವಿಕ್ರಮ್​! ಏನಿದು ವಿವಾದ? Chiyaan Vikram  
ಕಾಲಿವುಡ್

ಕೋತಿಯೊಂದಿಗಿರುವ ವಿಡಿಯೋ ಶೇರ್​ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ ಚಿಯಾನ್ ವಿಕ್ರಮ್​! ಏನಿದು ವಿವಾದ? Chiyaan Vikram

ಪ್ರಮುಖ ಮುಖ್ಯಾಂಶಗಳು

  • ಅಪರೂಪದ ಕೋತಿಯೊಂದಿಗಿನ ವಿಡಿಯೋ ಶೇರ್ ಮಾಡಿ ವಿವಾದಕ್ಕೆ ಸಿಲುಕಿದ ನಟ ವಿಕ್ರಮ್
  • ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಿಂದ ವಿಡಿಯೋವನ್ನು ಡಿಲೀಟ್ ಮಾಡಿದ ವಿಕ್ರಮ್
  • ವೈರಲ್ ವಿಡಿಯೋ ಹಿನ್ನೆಲೆಯಲ್ಲಿ ವಿಕ್ರಮ್ ಅವರ ಮಗಳ ಮಾವನ ವಿರುದ್ಧ ತನಿಖೆ ಆರಂಭ
  • ವೈರಲ್ ಆಗಿರುವ ಪ್ರಾಣಿ ಅಳಿವಿನಂಚಿನಲ್ಲಿರುವ ಲಾರ್ ಗಿಬ್ಬನ್ ಪ್ರಭೇದಕ್ಕೆ ಸೇರಿದೆ
  • ಕೋತಿ ಹೊಂದಿರುವ ಕುರಿತು ವಿಕ್ರಮ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಚಿಯಾನ್ ವಿಕ್ರಮ್ ( Chiyaan Vikram ) ಅವರು ಅಪರೂಪದ ಪ್ರಾಣಿಯ ಜತೆಗಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊ0ಡಿದ್ದಾರೆ.
ಆಗಸ್ಟ್ 9ರಂದು ವಿಕ್ರಮ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೋತಿಯೊಂದಿಗಿನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಈ ಸಂಬಂಧ ಮಾಧ್ಯಮ ವರದಿಗಳು ಹೊರಬಿದ್ದ ಬೆನ್ನಲ್ಲೇ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಆದರೂ, ಮಾಧ್ಯಮಗಳಲ್ಲಿ ಸಾಕಷ್ಟು ವರದಿಯಾಗಿದ್ದು, ಇದು ಪ್ರಾಣಿ ಪ್ರಿಯಯ ಆಕ್ರೋಶಕ್ಕೆ ಗುರಿಯಾಗಿದೆ. ವೈರಲ್​ ವಿಡಿಯೋ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ವಿಕ್ರಮ್ ಅವರ ಮಗಳ ಮಾವನ ವಿರುದ್ಧ ತನಿಖೆ ಆರಂಭಿಸಿದೆ.
ಅಂದಹಾಗೆ, ವೈರಲ್​ ವಿಡಿಯೋದಲ್ಲಿರುವ ಪ್ರಾಣಿಯನ್ನು ಅಳಿವಿನಂಚಿನಲ್ಲಿರುವ 'ಲಾರ್ ಗಿಬ್ಬನ್' (Lar Gibbon) ಎಂದು ಗುರುತಿಸಲಾಗಿದ್ದು, ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಅಂತಾರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಸಂರಕ್ಷಿಸಲ್ಪಟ್ಟ ಪ್ರಮುಖ ಪ್ರಾಣಿಯಾಗಿದೆ.
ಮಣಿಪುರದಿಂದ ತಮಿಳುನಾಡಿನ ಈರೋಡ್‌ಗೆ ಜೂನ್ ತಿಂಗಳಲ್ಲಿ ತರಲಾಗಿದ್ದ ಈ ಅಪರೂಪದ ಕೋತಿಯನ್ನು ಸಿ.ಕೆ. ರಂಗನಾಥನ್ ಅವರು ಅಧಿಕೃತವಾಗಿ ಖರೀದಿಸಿದ್ದಾರೆ ಎಂದು ವರದಿಯಾಗಿದ್ದರೂ, ಅದನ್ನು ಹೊಂದಲು ಅವರ ಬಳಿ ಸೂಕ್ತ ದಾಖಲೆಗಳಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಇದು ಆಗ್ನೇಯ ಏಷ್ಯಾದಿಂದ ಕಳ್ಳಸಾಗಣೆಯಾಗಿರಬಹುದು ಎಂದೂ ಶಂಕಿಸಲಾಗಿದೆ.
ಕೆವಿನ್​ ಕೇರ್ (Kavincare) ಸಂಸ್ಥೆಯ ಸಂಸ್ಥಾಪಕ ಹಾಗೂ ಸಿ.ಕೆ. ರಂಗನಾಥನ್ ಅವರ ಮಗ ಮನು ರಂಜಿತ್ ಅವರು ನಟ ವಿಕ್ರಮ್ ಅವರ ಮಗಳು ಅಕ್ಷಿತಾ ಅವರ ಪತಿ. ಸದ್ಯ ಕೋತಿ ವಿವಾದದ ಕುರಿತು ನಟ ವಿಕ್ರಮ್ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಈ ವಿವಾದದ ಬಗ್ಗೆ ವಿಕ್ರಮ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ, (ಏಜೆನ್ಸೀಸ್​).