ಭೀಕರ ಹತ್ಯೆ ನಡೆದು 7 ವರ್ಷಗಳೇ ಕಳೆದರೂ ಇಂದಿಗೂ ಪತ್ತೆಯಾಗಿಲ್ಲ ಖ್ಯಾತ ನಟಿಯ ತಲೆ, ಎಡಗೈ: ಹಚ್ಚೆ ಬಿಚ್ಚಿಟ್ಟ ಕೊಲೆ ರಹಸ್ಯ! Actress Sandhya
- ಚೆನ್ನೈನಲ್ಲಿ ಏಳು ವರ್ಷಗಳ ಹಿಂದೆ ನಡೆದ ಭೀಕರ ನಟಿ ಸಂಧ್ಯಾ ಹತ್ಯೆ ಪ್ರಕರಣದಲ್ಲಿ ತಲೆ ಇದುವರೆಗೆ ಪತ್ತೆಯಾಗಿಲ್ಲ
- ಬಲಗೈನಲ್ಲಿದ್ದ ಶಿವಪಾರ್ವತಿ ಮತ್ತು ಡ್ರಾಗನ್ ಹಚ್ಚೆ ಹಾಗೂ ಬಳೆಗಳ ಮೂಲಕ ನಟಿ ಸಂಧ್ಯಾಳ ಕೃತ್ಯ ಬೆಳಕಿಗೆ
- ಸಂಧ್ಯಾಳ ಶವವನ್ನು ವಿಲೇವಾರಿ ಮಾಡಲು ಬಳಸಿದ ಚೀಲಗಳು ಮತ್ತು ಹರಿತವಾದ ಆಯುಧ ದಂಪತಿಯ ಮನೆಯಲ್ಲಿ ಪತ್ತೆ
- ಚಿತ್ರರಂಗದಲ್ಲಿ ಬೆಳೆಯಲು ಯತ್ನಿಸುತ್ತಿದ್ದ ಸಂಧ್ಯಾಳ ಮೇಲೆ ಪತಿ ಬಾಲಕೃಷ್ಣನ್ ಅಕ್ರಮ ಸಂಬಂಧ ಶಂಕಿಸಿ ಕೊಲೆ
Actress Sandhya : ಚೆನ್ನೈನಲ್ಲಿ ಏಳು ವರ್ಷಗಳ ಹಿಂದೆ ಕೊಲೆಯಾದ ಖ್ಯಾತ ನಟಿಯೊಬ್ಬರ ತಲೆ ಇಂದಿಗೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 2019ರ ಜನವರಿ ತಿಂಗಳಲ್ಲಿ, ತಮಿಳುನಾಡಿನ ವಿವಿಧ ಭಾಗಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿದ ಮಹಿಳೆಯ ದೇಹದ ಹಲವು ಭಾಗಗಳು ಪತ್ತೆಯಾಗಿದ್ದವು. ಒಂದು ಕಡೆ ಕೈ ಮತ್ತು ಕಾಲುಗಳು, ಮತ್ತೊಂದು ಕಡೆ ಮೂಳೆಗಳು ಹಾಗೂ ಆಂತರಿಕ ಅಂಗಗಳು ಸಿಕ್ಕಿದ್ದವು. ಆದರೆ, ತಲೆ ಮತ್ತು ಎಡಗೈ ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹಂತಕ ಯಾರೆಂಬುದು ಆರಂಭದಲ್ಲಿ ಪೊಲೀಸರಿಗೆ ತಿಳಿದಿರಲಿಲ್ಲ. ಬೌದ್ಧಿಕ ಹಾಗೂ ತಾಂತ್ರಿಕ ತನಿಖೆಯ ಭಾಗವಾಗಿ ಸುಮಾರು 11,700 ಟನ್ ಕಸವನ್ನು ಪರಿಶೀಲನೆ ಮಾಡಲಾಗಿತ್ತು. ಆದರೂ, ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ, ಪ್ಲಾಸ್ಟಿಕ್ ಚೀಲದಲ್ಲಿದ್ದ ಬಲಗೈಯ ಮೇಲಿದ್ದ ಹಚ್ಚೆ ತನಿಖೆಯಲ್ಲಿ ದೊಡ್ಡ ತಿರುವು ನೀಡಿತು. ಆ ಹಚ್ಚೆಯಲ್ಲಿ 'ಶಿವಪಾರ್ವತಿ' ಮತ್ತು 'ಡ್ರಾಗನ್' ಚಿತ್ರವಿತ್ತು. ಈ ಸುಳಿವಿನ ಮೂಲಕ ತನಿಖೆಯು 37 ವರ್ಷದ ತಮಿಳು ನಟಿ ಸಂಧ್ಯಾ ಕಡೆಗೆ ಮುಖ ಮಾಡಿತು. ಶೀಘ್ರದಲ್ಲೇ ಪೊಲೀಸರು ಸಂಧ್ಯಾರ ಹಂತಕನ ಬಳಿಯೂ ತಲುಪಿದರು. ಆಕೆಯ ಹಂತಕ ಬೇರೆ ಯಾರೂ ಅಲ್ಲ, ಚಲನಚಿತ್ರ ನಿರ್ಮಾಪಕ ಹಾಗೂ ಸಂಧ್ಯಾರ ಪತಿ ಬಾಲಕೃಷ್ಣನ್.
ಈ ಪ್ರಕರಣದ ಸಂಪೂರ್ಣ ವಿವರಕ್ಕೆ ಬರುವುದಾದರೆ, ತನಿಖೆಯ ನೇತೃತ್ವವನ್ನು ಉಪ ಆಯುಕ್ತ ಮುತ್ತುಸ್ವಾಮಿ ಎಂಬುವರು ವಹಿಸಿದ್ದರು. ದೇಹದ ತುಂಡುಗಳನ್ನು ಪರಿಶೀಲಿಸಿದ ವಿಧಿವಿಜ್ಞಾನ ತಂಡವು ಅವೆಲ್ಲವೂ ಒಬ್ಬ ಮಹಿಳೆಯದ್ದೇ ಎಂದು ದೃಢಪಡಿಸಿತು. ತದನಂತರ ನಾಪತ್ತೆಯಾದ ಮಹಿಳೆಯರ ಬಗ್ಗೆ ತನಿಖೆ ನಡೆಸಿದರೂ ಪೊಲೀಸರಿಗೆ ಯಾವುದೇ ಮಾಹಿತಿ ಸಿಗಲಿಲ್ಲ. ಮಾಧ್ಯಮಗಳಲ್ಲಿ ಪ್ರಕಟಣೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ನಂತರ ಪೊಲೀಸರು ದೇಹದ ಭಾಗಗಳನ್ನು ಮತ್ತಷ್ಟು ಕೂಲಂಕಷವಾಗಿ ಪರಿಶೀಲಿಸಲು ನಿರ್ಧರಿಸಿದರು. ಆಕೆಯ ಕೈಯಲ್ಲಿದ್ದ ಹಚ್ಚೆ ಮತ್ತು ಬಳೆ ಈ ಪ್ರಕರಣದಲ್ಲಿ ಅತ್ಯಂತ ನಿರ್ಣಾಯಕ ಸಾಕ್ಷಿಯಾದವು. ಅದೇ ಸಮಯದಲ್ಲಿ, ತೂತುಕುಡಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ತನ್ನ ಮಗಳು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದರು. ಚೆನ್ನೈನಲ್ಲಿ ಗಂಡ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದ 37 ವರ್ಷದ ನಟಿ ಸಂಧ್ಯಾ ನಾಪತ್ತೆಯಾಗಿದ್ದಾರೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದರು.
ಸಂಧ್ಯಾ ಅವರ ಪತಿ ಬಾಲಕೃಷ್ಣನ್ ಅವರ ಬಳಿ ವಿಚಾರಿಸಿದಾಗ, ಆಕೆ ಜನವರಿ 19 ರಂದು ತೂತುಕುಡಿಗೆ ಹೋಗಿದ್ದಾಳೆ ಮತ್ತು ಅಲ್ಲಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಬಾಲಕೃಷ್ಣನ್ ತಿಳಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನಂತರ ಪೊಲೀಸರ ಸೂಚನೆಯ ಮೇರೆಗೆ ಕುಟುಂಬದವರು ದೇಹದ ತುಂಡುಗಳನ್ನು ಪರಿಶೀಲಿಸಿ, ಸಂಧ್ಯಾಳ ಕೈಯಲ್ಲಿದ್ದ ಹಚ್ಚೆ ಹಾಗೂ ಆಭರಣಗಳನ್ನು ಗುರುತಿಸಿದರು. ಡಿಎನ್ಎ (DNA) ಪರೀಕ್ಷೆಯೂ ಪಾಸಿಟಿವ್ ಆಗಿ ಬಂದಿತು.
ಆರಂಭದಲ್ಲಿ ಬಾಲಕೃಷ್ಣನ್ ತಾನು ಹೇಳಿದ ಮಾತಿಗೆ ಬದ್ಧನಾಗಿದ್ದರೂ, ನಂತರದ ತನಿಖೆಗಳಲ್ಲಿ ಅವರ ಹೇಳಿಕೆಗಳಲ್ಲಿ ವ್ಯತ್ಯಾಸವಿರುವುದನ್ನು ಪೊಲೀಸರು ಗಮನಿಸಿದರು. ಕೊನೆಗೆ ಪೊಲೀಸರ ಕಠಿಣ ವಿಚಾರಣೆಗೆ ಬಗ್ಗಿದ ಬಾಲಕೃಷ್ಣನ್, ತಾನೇ ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡನು.
ಸಂಧ್ಯಾ ಮತ್ತು ಬಾಲಕೃಷ್ಣನ್ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಸಂಧ್ಯಾ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಬಾಲಕೃಷ್ಣನ್ ಸಂಶಯಿಸಿದ್ದರು. 2019ರ ಜನವರಿ 19ರ ರಾತ್ರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಬಾಲಕೃಷ್ಣನ್ ಕುಡಿದ ಮತ್ತಿನಲ್ಲಿ ಸಂಧ್ಯಾ ಮೇಲೆ ಕೊಡಲಿಯಿಂದ ದಾಳಿ ಮಾಡಿ, ಆಕೆಯ ದೇಹವನ್ನು ತುಂಡರಿಸಿ ವಿವಿಧೆಡೆ ಎಸೆದಿದ್ದಾಗಿ ತಪ್ಪೊಪ್ಪಿಕೊಂಡನು.
ವಿಚಾರಣೆಯ ಬಳಿಕ ಪೊಲೀಸರು ದಂಪತಿಯ ಮನೆಯಲ್ಲಿ ಶೋಧ ನಡೆಸಿದಾಗ ಸಂಧ್ಯಾಳ ದೇಹವನ್ನು ವಿಲೇವಾರಿ ಮಾಡಲು ಬಳಸಿದ ಚೀಲಗಳನ್ನು ಹೋಲುವ ಪ್ಲಾಸ್ಟಿಕ್ ಚೀಲಗಳು ಮತ್ತು ಮೈತುಂಡರಿಸಲು ಬಳಸಿದ ಹರಿತವಾದ ಆಯುಧ ಪತ್ತೆಯಾಯಿತು. ಫೋರೆನ್ಸಿಕ್ ತಂಡಗಳು ಮನೆಯ ನೆಲದ ಮೇಲೆ ರಕ್ತದ ಕಲೆಗಳನ್ನು ಪತ್ತೆಹಚ್ಚಿದ್ದಲ್ಲದೆ, ಬಾಲಕೃಷ್ಣನ್ ರಾತ್ರಿ ವೇಳೆ ಚೀಲಗಳೊಂದಿಗೆ ಮೋಟಾರ್ ಸೈಕಲ್‌ನಲ್ಲಿ ತೆರಳುತ್ತಿದ್ದ ಸಿಸಿಟಿವಿ ದೃಶ್ಯಾವಳಿಗಳೂ ಸಹ ಸಾಕ್ಷ್ಯವಾಗಿ ಸಿಕ್ಕವು.
ತನಿಖಾಧಿಕಾರಿಗಳು ಸಂಧ್ಯಾಳನ್ನು ಗುರುತಿಸಿ, ಕೃತ್ಯವನ್ನು ಮರುನಿರ್ಮಿಸಿ ಬಹುತೇಕ ಅವಶೇಷಗಳನ್ನು ಪತ್ತೆಹಚ್ಚಿದರೂ, ತಲೆ ಮತ್ತು ಎಡಗೈ ಮಾತ್ರ ಸಾವಿರಾರು ಟನ್ ಕಸದ ನಡುವೆಯೂ ಸಿಗಲಿಲ್ಲ. ಮುಖ ಮತ್ತು ಒಂದು ಕೈ ಇಲ್ಲದ ಕಾರಣ ಅಪರಿಚಿತಳಾಗಬೇಕಿದ್ದ ಆಕೆಯ ಕೊಲೆ ಪ್ರಕರಣದಲ್ಲಿ, ಆ ಕೈಯಲ್ಲಿದ್ದ 'ಶಿವ-ಪಾರ್ವತಿ' ಹಾಗೂ 'ಡ್ರಾಗನ್' ಹಚ್ಚೆಗಳು ಆ ತಾಯಿಯ ಕಣ್ಣಿಗೆ ಬಿದ್ದು ಮಗಳ ಹೆಸರನ್ನು ಲೋಕಕ್ಕೆ ತಿಳಿಸಿದವು.
2000ರ ದಶಕದ ಆರಂಭದಲ್ಲಿ ವಿವಾಹವಾಗಿದ್ದ ಸಂಧ್ಯಾ ಮತ್ತು ಬಾಲಕೃಷ್ಣನ್ ದಂಪತಿಯ ಸಂಸಾರದಲ್ಲಿ ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಕಲಹ ಹಾಗೂ ದೌರ್ಜನ್ಯದ ಹಿನ್ನೆಲೆಯಲ್ಲಿ ಬಿರುಕು ಮೂಡಿದ್ದು, ನಾಯಕಿಯಾಗಲು ಯತ್ನಿಸುತ್ತಿದ್ದ ಸಂಧ್ಯಾಳ ಮೇಲೆ ಪತಿ ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿ, ಮತ್ತೊಂದು ಸಿನಿಮಾಗೆ ಹಣ ತರುವಂತೆ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ, ಒಪ್ಪಂದಗಳು ಕೈಗೂಡದೆ ದಂಪತಿ ನಡುವೆ ಭುಗಿಲೆದ್ದ ಮತ್ತೊಂದು ಗಲಾಟೆ ಹಾಗೂ ಆಕೆಯು ಮನೆಬಿಟ್ಟು ಹೋಗಲು ನಿರ್ಧರಿಸಿದ ನಿರ್ಧಾರವೇ ಕೊಲೆಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 2018 ರಲ್ಲಿ, ಸಂಧ್ಯಾ ತನ್ನ ಪತಿ ಬಾಲಕೃಷ್ಣನ್ ವಿರುದ್ಧ ದೌರ್ಜನ್ಯದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು, (ಏಜೆನ್ಸೀಸ್).