ಜಾತಿ ಮತ್ತು ಧರ್ಮದ ಬಗ್ಗೆ ನಟಿ ಮೀನಾ ಹಂಚಿಕೊಂಡ ಪೋಸ್ಟ್​ ವೈರಲ್​: ಅಭಿಮಾನಿಗಳಿಂದ ಬಹುಪರಾಕ್...​! Actress Meena  
ಕಾಲಿವುಡ್

ಜಾತಿ ಮತ್ತು ಧರ್ಮದ ಬಗ್ಗೆ ನಟಿ ಮೀನಾ ಹಂಚಿಕೊಂಡ ಪೋಸ್ಟ್​ ವೈರಲ್​: ಅಭಿಮಾನಿಗಳಿಂದ ಬಹುಪರಾಕ್...​! Actress Meena

ಪ್ರಮುಖ ಮುಖ್ಯಾಂಶಗಳು

  • ಜಾತಿ ಧರ್ಮ ಹುಟ್ಟಿದ ಸ್ಥಳ ಲಿಂಗದ ಬಗ್ಗೆ ಹೆಮ್ಮೆ ಪಡಬಾರದು ಎಂದು ನಟಿ ಮೀನಾ ಇನ್​ಸ್ಟಾಗ್ರಾಮ್​ನಲ್ಲಿ ತಿಳಿಸಿದ್ದಾರೆ
  • ಮನುಷ್ಯನ ನಡತೆ ಕಾರ್ಯಗಳು ಹಾಗೂ ಮಾನವೀಯತೆಯ ಬಗ್ಗೆ ಮಾತ್ರ ಹೆಮ್ಮೆ ಪಡಬೇಕು ಎಂದು ಮೀನಾ ಹೇಳಿದ್ದಾರೆ
  • ನಟಿ ಮೀನಾ ಹಂಚಿಕೊಂಡಿರುವ ಈ ಶಕ್ತಿಯುತವಾದ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ
  • ನಟಿ ಮೀನಾ ಅವರ ಈ ಆಲೋಚನೆಯನ್ನು ಮೆಚ್ಚಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡುತ್ತಿದ್ದಾರೆ
Actress Meena : ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಬಹುಭಾಷಾ ನಟಿ ಮೀನಾ, ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಡಿಜಿಟಲ್​ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ನೆಟ್ಟಿಗರ ಗಮನವನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.
ಜಾತಿ, ಧರ್ಮ, ಹುಟ್ಟಿದ ಸ್ಥಳ ಮತ್ತು ಲಿಂಗ ಎಂಬುದು ನಾವು ಆಯ್ಕೆ ಮಾಡಿಕೊಳ್ಳುವ ವಿಷಯಗಳಲ್ಲ, ಅವು ಹುಟ್ಟಿನಿಂದಲೇ ನಾವು ಪಡೆದುಕೊಂಡು ಬರುವಂತಹವು. ಆದ್ದರಿಂದ ನಾವು ಅವುಗಳ ಬಗ್ಗೆ ಹೆಮ್ಮೆಪಡಬಾರದು. ಬದಲಿಗೆ, ನಮ್ಮ ನಡತೆ, ಕಾರ್ಯಗಳು ಮತ್ತು ಮಾನವೀಯತೆಯ ಬಗ್ಗೆ ಹೆಮ್ಮೆ ಪಡಬೇಕು ಎಂದು ನಟಿ ಮೀನಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡು ಫಾಲೋವರ್ಸ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಈ ಭಾವನಾತ್ಮಕ ಪೋಸ್ಟ್ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರನ್ನು ಒಗ್ಗೂಡಿಸುವ ಬದಲು ವಿಭಜಿಸುವ ಅಂಶಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ಅನೇಕರು ನಟಿಗೆ ಧನ್ಯವಾದ ತಿಳಿಸಿದ್ದಾರೆ. ಆಕೆಯ ಈ ಸಂದೇಶವು ಅಭಿಮಾನಿಗಳ ಮನ ಮುಟ್ಟಿದ್ದು, ಪೋಸ್ಟ್ ಅನ್ನು ವ್ಯಾಪಕವಾಗಿ ಶೇರ್​ ಮಾಡುವುದರ ಜೊತೆಗೆ ಅದರ ಪ್ರಸ್ತುತತೆ ಮತ್ತು ಪ್ರಭಾವವನ್ನು ಎಲ್ಲರೂ ಕೊಂಡಾಡಿದ್ದಾರೆ.

ನಟಿ ಮೀನಾ ಕುರಿತು ಹೇಳುವುದಾದರೆ, ಅವರು ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು ಮತ್ತು ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೀನಾ ಅವರು 90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದರು. ರಜಿನಿಕಾಂತ್​, ಕಮಲ್​ ಹಾಸನ್​ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್​ ಹಾಗೂ ರವಿಚಂದ್ರನ್​ರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ನಟಿ ಮೀನಾ ನಟಿಸಿದ್ದಾರೆ.
ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮೀನಾ ಅವರು ಉದ್ಯಮಿ ವಿದ್ಯಾಸಾಗರ್ ಅವರನ್ನು ವಿವಾಹವಾದರು. ದಾಂಪತ್ಯ ಜೀವನ ಚೆನ್ನಾಗಿ ಸಾಗುವಾಗಲೇ ಮೀನಾ ಬಾಳಲ್ಲಿ ದುರಂತವೊಂದು ಘಟಿಸಿತು. ಅದೇನೆಂದರೆ, ಅವರ ಪತಿ ವಿದ್ಯಾಸಾಗರ್​ 2022, ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ವಿದ್ಯಾಸಾಗರ್ ಅವರು ಬಹು ಅಂಗಾಂಗ ವೈಫಲ್ಯ ಮತ್ತು ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆಳೆದರು. ಮೀನಾ ಮತ್ತು ವಿದ್ಯಾಸಾಗರ್​ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ನಟಿಸಿದ್ದಾಳೆ.
ನಟಿ ಮೀನಾ ಅವರ ಹೊಸ ಸಿನಿಮಾ ದೃಶ್ಯಂ 3 ಇತ್ತೀಚೆಗಷ್ಟೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಸಿನಿಮಾವನ್ನು ಜೀತು ಜೋಸೆಫ್ ಅವರೇ ನಿರ್ದೇಶಿಸಿದ್ದಾರೆ ಮತ್ತು ಮೋಹನ್ ಲಾಲ್ ನಾಯಕನಾಗಿ ನಟಿಸಿದ್ದಾರೆ. ಮೀನಾ ಇತ್ತೀಚೆಗೆ ಜೀತು ಜೋಸೆಫ್ ನಿರ್ದೇಶನದ ರೋಸ್ಲಿನ್ ಎಂಬ ವೆಬ್ ಸರಣಿಯಲ್ಲಿಯೂ ನಟಿಸಿದ್ದರು, (ಏಜೆನ್ಸೀಸ್​).