- ತೀವ್ರ ಜ್ವರದಿಂದ ಬಳಲುತ್ತಿರುವ ನಟಿ ಮಮಿತಾ ಬೈಜು
- ಆಸ್ಟೇಲಿಯಾದಲ್ಲಿ ಆಯೋಜಿಸಿದ್ದ ಓಣಂ ಆಚರಣೆಯಿಂದ ದೂರ ಉಳಿದ ನಟಿ
- ಸದ್ಯದಲ್ಲೇ ಆಸ್ಟ್ರೇಲಿಯಾದ ಅಭಿಮಾನಿಗಳನ್ನು ಭೇಟಿ ಮಾಡುವೆ ಎಂದು ವಿಡಿಯೋ ಮಾಡಿದ ನಟಿ
ಮಲಯಾಳಂನ ‘ಪ್ರೇಮಲು’ ನಟಿ ಮಮಿತಾ ಬೈಜು ತ್ರಿಬಲ್ ಖುಷಿಯಲ್ಲಿದ್ದಾರೆ. ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ನಟಿಯ ಮೂರು ಸಿನಿಮಾಗಳು ರಿಲೀಸ್ ಆಗಿ, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ತಮಿಳಿನ ‘ಜನನಾಗನ್’ (ಜು.23), ‘ವಿಶ್ವನಾಥ್ ಆ್ಯಂಡ್ ಸನ್ಸ್’ (ಆ. 14) ಹಾಗೂ ‘ಬೆಥ್ಲಹೆಂ ಕುಡುಂಬಂ ಯೂನಿಟ್’ (ಆ.21) ಸಿನಿಮಾಗಳ ಗೆಲುವಿನಿಂದಾಗಿ ದಕ್ಷಿಣ ಚಿತ್ರರಂಗದಲ್ಲಿ ಮಮಿತಾ ಬೇಡಿಕೆ ಹೆಚ್ಚಿದೆ. ಸದ್ಯ ಅವರ ಹಲವು ಸಿನಿಮಾಗಳ ಲೈನಪ್‌ನಲ್ಲಿದ್ದು, ನಿರಂತರ ಶೂಟಿಂಗ್‌ನಲ್ಲಿದ್ದಾರೆ. ಈ ಯಶಸ್ಸಿನ ಮಧ್ಯೆಯೇ, ಮಮಿತಾಗೆ ತೀವ್ರ ಜ್ವರ, ಅಲರ್ಜಿ ಜತೆಗೆ ಸುಸ್ತು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ನಾಳೆ (ಸೆ.5) ಆಸ್ಟ್ರೇಲಿಯಾದಲ್ಲಿ ಮಲಯಾಳಂ ಸಂಘದಿಂದ ಆಯೋಜಿಸಲಾಗಿದ್ದ ಓಣಂ ಹಬ್ಬದ ಆಚರಣೆಯಲ್ಲಿ ನಟಿ ಭಾಗವಹಿಸುವವರಿದ್ದರು. ಆದರೆ, ಇದೀಗ ಅನಾರೋಗ್ಯದ ಹಿನ್ನೆಲೆಯಲ್ಲಿ ಮಮಿತಾ ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿದ್ದು, ‘ದೇಹದಲ್ಲಿ ಸುಸ್ತು ಹಾಗೂ ಅಲರ್ಜಿ ಕಾಣಿಸಿಕೊಂಡಿರುವುದರಿಂದ ವೈದ್ಯರು ನನಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಹೀಗಾಗಿ, ಆಸ್ಟ್ರೇಲಿಯಾದಲ್ಲಿ ಆಯೋಜಿಸಿದ್ದ ಓಣಂ ಆಚರಣೆಯಲ್ಲಿ ಭಾಗವಹಿಸಲು ಆಗುತ್ತ್ತಿಲ್ಲ. ಕ್ಷಮೆ ಇರಲಿ. ಮುಂದಿನ ದಿನಗಳಲ್ಲಿ ಬರುತ್ತೇನೆ’ ಎಂದು ಹೇಳಿದ್ದಾರೆ. ಮಮಿತಾ ಗೈರಿನ ಹಿನ್ನೆಲೆಯಲ್ಲಿ ನಾಳೆಯ ಓಣಂ ಆಚರಣೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಮಮಿತಾ ಬೈಜು ತಮಿಳಿನ ‘ಇರಂದು ವಾನಂ’, ಮಲಯಾಳಂನ ‘ಹಲೋ ಡಿಯರ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್