ಸಿನಿವಾಣಿ

ಮೆಜೆಸ್ಟಿಕ್-2 ಪ್ಯಾಕಪ್: ಭರತ್, ಸಂಹಿತಾ ವಿನ್ಯಾ ನಟನೆಯ ಸಿನಿಮಾ

ಬೆಂಗಳೂರು: ಇದು ಪ್ರೀಕ್ವಲ್ ಮತ್ತು ಸೀಕ್ವೆಲ್‌ಗಳ ಸಮಯ. ‘ಕಾಂತಾರ’, ‘ಭೈರತಿ ರಣಗಲ್’, ‘ಪುಷ್ಪ 2’, ‘ಕಲ್ಕಿ 2’, 'ಘೋಸ್ಟ್’, ‘ಬೀರಬಲ್’ ಸೇರಿ ಹಲವು ಚಿತ್ರಗಳ ಹಿಂದಿನ ಮತ್ತು ಮುಂದಿನ ಕಥೆಗಳು ರೆಡಿಯಾಗುತ್ತಿವೆ. ಆದರೆ, ಕೆಲವೊಮ್ಮೆ ಶೀರ್ಷಿಕೆಯ ಮುಂದೆ ‘ಭಾಗ 2’ ಅಂತಿದ್ದರೂ, ಅದು ಹೊಸ ಕಥೆಯಾಗಿರುತ್ತದೆ. ಆ ಸಾಲಿಗೆ ಸೇರುವ ಸಿನಿಮಾ ‘ಮೆಜೆಸ್ಟಿಕ್ 2’. 2002ರಲ್ಲಿ ಪಿ.ಎನ್. ಸತ್ಯ ನಿರ್ದೇಶನದಲ್ಲಿ, ದರ್ಶನ್ ನಾಯಕನಾಗಿದ್ದ ‘ಮೆಜೆಸ್ಟಿಕ್’ ರಿಲೀಸ್ ಆಗಿತ್ತು. ಇದೀಗ ಹೊಸ ಕಥೆಯೊಂದಿಗೆ ‘ಮೆಜೆಸ್ಟಿಕ್ 2’ ತೆರೆಗೆ ಬರಲು ರೆಡಿಯಾಗುತ್ತಿದೆ. ರಾಮು ಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದು, ಇತ್ತೀಚೆಗಷ್ಟೆ ಶೂಟಿಂಗ್ ಪೂರ್ಣಗೊಳಿಸಿ, ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ನಿರ್ದೇಶಕ ರಾಮು, ‘ಸತತವಾಗಿ 126 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಇನ್ನಷ್ಟೇ ಡಬ್ಬಿಂಗ್ ಪ್ರಾರಂಭಿಸಬೇಕಿದೆ. ಇದೇ ಡಿಸೆಂಬರ್ 26ರಂದು ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು. ನಾಯಕ ಭರತ್, ‘ದರ್ಶನ್ ಅವರದು 2002ರ ‘ಮೆಜೆಸ್ಟಿಕ್’ ಕಥೆಯಾದರೆ, ಇದು 2024ರ ‘ಮೆಜೆಸ್ಟಿಕ್’ ಕಥೆ. ಬೆಂಗಳೂರಿನ ಕತ್ತಲ ಲೋಕದಲ್ಲಿ ಏನೇನೆಲ್ಲ ನಡೆಯುತ್ತಿದ್ದ ಎಂಬುದನ್ನು ತೋರಿಸಲಾಗಿದೆ. ನಾನಿಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎನ್ನುತ್ತಾರೆ. ನಾಯಕಿ ಸಂಹಿತಾ ವಿನ್ಯಾ, ‘ತುಂಬ ದಿನಗಳ ಶ್ರಮದ ಪ್ರತಿಲವಾಗಿ ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ. ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ’ ಎಂದರು.