ಸಿನಿವಾಣಿ

ಬಯೋಪಿಕ್ ಮಾಡಲ್ಲ; ಹಣ ಹಿಂದಿರುಗಿಸಪ್ಪಾ ಪ್ರತಾಪ್​

ಬೆಂಗಳೂರು: ‘ನಿಮ್ಮನ್ನು ನೋಡಿ ನಾಲ್ಕು ಜನ ಸ್ಪೂರ್ತಿಗೊಂಡು ಬೆಳೆಯಲಿ ಎಂಬ ಆಸೆಯಿಂದ ಚಿತ್ರ ಮಾಡುವುದಕ್ಕೆ ಯೋಚಿಸಿದ್ದೆ. ಇತ್ತೀಚಿನ ಗೊಂದಲದಿಂದಾಗಿ, ಚಿತ್ರ ಮಾಡುವ ಯೋಚನೆಯನ್ನು ಕೈಬಿಟ್ಟಿದ್ದೇನೆ. ದಯವಿಟ್ಟು ಹಣವನ್ನು ಹಿಂದಿರುಗಿಸಿ’ ಎಂದು ನಿರ್ದೇಶಕ ರಾಜಶೇಖರ್ ಹೇಳಿದ್ದಾರೆ.

ಈ ಹಿಂದೆ ‘ಅಮೃತವಾಣಿ’, ‘ಪೆರೋಲ್’ ಮತ್ತು ‘ಬರ್ಫಿ’ ಚಿತ್ರಗಳನ್ನು ನಿರ್ದೇಶಿಸದ್ದ ರಾಜಶೇಖರ್, ಕೆಲವು ತಿಂಗಳುಗಳ ಹಿಂದೆ ಡ್ರೋನ್ ಪ್ರತಾಪ್ ಸಾಧನೆಯನ್ನು ಗುರುತಿಸಿ, ಅವರ ಕುರಿತು ಚಿತ್ರ ಮಾಡಬೇಕೆಂದು ರಾಜಶೇಖರ್ ಮುಂದಾಗಿದ್ದರು. ಪ್ರತಾಪ್ ಅವರನ್ನು ಭೇಟಿ ಮಾಡಿ ಈ ವಿಷಯ ಸಹ ಮಾತಾಡಿದ್ದರು. ಒಂದು ಲಕ್ಷ ಮುಂಗಡವನ್ನೂ ಕೊಟ್ಟಿದ್ದರು. ಈಗ ಚಿತ್ರ ಮಾಡುವ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದಾರೆ.

‘ಅವರ ಕಥೆಯನ್ನು ಚಿತ್ರ ಮಾಡುತ್ತಿರುವುದರಿಂದ, ಎರಡು ಲಕ್ಷ ಸಂಭಾವನೆ ಮತ್ತು ಲಾಭದಲ್ಲಿ 20 ಪರ್ಸೆಂಟ್ ಕೊಡಬೇಕು ಎಂದು ಪ್ರತಾಪ್ ಜತೆಗೆ ಒಪ್ಪಂದವಾಗಿತ್ತು. ಮುಂಗಡವಾಗಿ ಒಂದು ಲಕ್ಷ ರೂ. ಸಹ ಕೊಟ್ಟಿದ್ದೆ. ಆದರೆ, ಆರು ತಿಂಗಳ ಹಿಂದೆ ಭೇಟಿ ಮಾಡಿ, ಚಿತ್ರ ತಡವಾಗುತ್ತಿರುವುದರಿಂದ ಬೇರೊಬ್ಬರು ಚಿತ್ರ ಮಾಡುವುದಕ್ಕೆ ಮುಂದೆ ಬಂದಿದ್ದಾರೆ ಎಂದು ಪ್ರತಾಪ್ ಹೇಳಿದರು.

ನಾನು ಅವರ ಕುರಿತ ಚಿತ್ರ ಮಾಡುವುದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ನೋವಾದರೂ, ಬಿಟ್ಟು ಕೊಟ್ಟೆ. ಚಿತ್ರ ಮಾಡುವ ಯೋಚನೆಯನ್ನು ಸಂಪೂರ್ಣ ಕೈಬಿಟ್ಟಿದ್ದೇನೆ. ದಯವಿಟ್ಟು ಹಣವನ್ನು ಹಿಂದಿರುಗಿಸಲು ಅವರಿಗೆ ಮನವಿ ಮಾಡಿದ್ದೇನೆ’ ಎನ್ನುತ್ತಾರೆ ರಾಜಶೇಖರ್.