ಸಿನಿವಾಣಿ

ನಾನವಳಲ್ಲ ನಾನವಳಲ್ಲ...; ಸಲ್ಮಾನ್​ ಕುರಿತು ಸಮಂತಾ ಮಾತು..

ಬಾಲಿವುಡ್ ನಟ ಸಲ್ಮಾನ್ ಖಾನ್ ಜೀವನದಲ್ಲಿ ಅದೆಷ್ಟು ಗರ್ಲ್​ಫ್ರೆಂಡ್​ಗಳು ಬಂದು ಹೋಗಿದ್ದಾರೆ ಎಂದು ಲೆಕ್ಕ ಇಟ್ಟವರಿಲ್ಲ. ಸಂಗೀತಾ ಬಿಜಲಾನಿಯಿಂದ ಪ್ರಾರಂಭಿಸಿ ಇಯೂಲಿಯಾ ವಂಟೂರ್​ವರೆಗೂ ಹಲವರು ಪ್ರೇಯಸಿಯರು ಸಲ್ಮಾನ್ ಜೀವನದಲ್ಲಿ ಬಂದು ಹೋಗಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ಸಮಂತಾ. ಯಾರು, ಟಾಲಿವುಡ್ ನಟಿ ಸಮಂತಾನಾ? ಎಂಬ ಪ್ರಶ್ನೆ ಬರುವುದು ಸಹಜ. ಇಲ್ಲ ಇದು ಆ ಸಮಂತಾ ಅಲ್ಲ. ಈಕೆ ಹಾಲಿವುಡ್ ನಟಿ ಸಮಂತಾ ಲಾಕ್​ವುಡ್.

‘ಶೂಟ್ ದಿ ಹೀರೋ’, ‘ಹವಾಯ್ 5-0’ ಮುಂತಾದ ಚಿತ್ರಗಳ ಖ್ಯಾತಿಯ ಸಮಂತಾ, ಇತ್ತೀಚೆಗೆ ಸಲ್ಮಾನ್ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದರು. ಅದಲ್ಲದೆ, ಸಲ್ಮಾನ್ ಜತೆಗೆ ಹಲವು ಕಡೆ ಕಾಣಿಸಿಕೊಂಡಿದ್ದರು. ಇದೆಲ್ಲದರಿಂದ, ಅವರನ್ನು ಸಲ್ಮಾನ್​ನ ಹೊಸ ಗೆಳತಿ ಎಂದು ಕರೆಯಲಾಗುತ್ತಿದೆ. ಆದರೆ, ಸಮಂತಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ತಾನು ಸಲ್ಮಾನ್ ಗರ್ಲ್​ಫ್ರೆಂಡ್ ಅಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

‘ಜನ ಏನು ಬೇಕಾದರೂ ಮಾತನಾಡುತ್ತಾರೆ. ಸಲ್ಮಾನ್ ಅವರನ್ನು ಭೇಟಿ ಮಾಡುವ ಅವಕಾಶವೊಂದು ಸಿಕ್ಕಿತ್ತು. ಅವರೊಬ್ಬ ಒಳ್ಳೆಯ ಮನುಷ್ಯ. ಅದಕ್ಕಿಂತ ಅವರ ಬಗ್ಗೆ ಹೆಚ್ಚು ಹೇಳುವುದಕ್ಕೆ ನನಗೆ ಆಗುವುದಿಲ್ಲ. ಆದರೆ, ನಾನು ಅವರ ಗರ್ಲ್​ಫ್ರೆಂಡ್ ಎಂದು ಜನ ಅದ್ಯಾಕೆ ನಿರ್ಧಾರಕ್ಕೆ ಬಂದರೋ ನನಗೆ ಗೊತ್ತಿಲ್ಲ. ಸಲ್ಮಾನ್ ತರಹ ಹೃತಿಕ್ ರೋಶನ್ ಅವರನ್ನು ಸಹ ಭೇಟಿ ಮಾಡಿದ್ದೇನೆ. ಹೃತಿಕ್ ಮತ್ತು ನನ್ನ ಮಧ್ಯೆ ಯಾಕೆ ಸಂಬಂಧ ಕಲ್ಪಿಸಲಿಲ್ಲ? ನಮ್ಮಿಬ್ಬರ ಬಗ್ಗೆ ಯಾಕೆ ಯಾರೂ ಮಾತನಾಡುವುದಿಲ್ಲ? ಈ ತರಹದ ಸುದ್ದಿಗಳನ್ನು ಯಾರು ಸೃಷ್ಟಿ ಮಾಡುತ್ತಾರೋ ನನಗೆ ಗೊತ್ತಿಲ್ಲ’ ಎಂದು ಸಮಂತಾ ಲಾಕ್​ವುಡ್ ಹೇಳಿಕೊಂಡಿದ್ದಾರೆ. - ಏಜೆನ್ಸೀಸ್