ಸಿನಿವಾಣಿ

ದಸರಾ ದರ್ಬಾರ್: ತಾರೆಯರ ಹಬ್ಬದ ಸಂಭ್ರಮ...

ಕಳೆದ ವರ್ಷ ಕರೊನಾ ಮತ್ತು ಲಾಕ್​ಡೌನ್​ನಿಂದ ದಸರಾ ಸಂಭ್ರಮಾಚರಣೆ ಸ್ವಲ್ಪ ಮಂಕಾಗಿತ್ತು. ಚಂದನವನದ ಸೆಲೆಬ್ರಿಟಿಗಳು ಸಹ ಹಬ್ಬ ಆಚರಿಸುವ ಮೂಡ್​ನಲ್ಲಿ ಇರಲಿಲ್ಲ. ಈಗ ಕ್ರಮೇಣ ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿರುವುದರಿಂದ, ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯ ನಟಿಯರು ಹಬ್ಬದ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಈ ವರ್ಷ ದಸರಾ ಆಚರಣೆ ಹೇಗಿರಲಿದೆ ಎಂದು ಕೆಲವರು ವಿಜಯವಾಣಿ ಜತೆಗೆ ಮಾತನಾಡಿದ್ದಾರೆ, ಓದುವಂತವರಾಗಿ...

ಸಿಹಿ ತಿನಿಸಿಗಾಗಿ ಮನೆ ಮನೆ ಸುತ್ತಾಟ

ಕಳೆದ ವರ್ಷ ಕೋವಿಡ್​ನಿಂದ ಹಬ್ಬ ಆಚರಿಸುವುದಕ್ಕೆ ಆಗಿರಲಿಲ್ಲ. ಹಬ್ಬ ಎಂದರೆ ಮನೆಯಲ್ಲಿ ಅಲಂಕಾರ ಮಾಡುವುದು, ಗಾಡಿ ತೊಳೆಯುವುದು ನೆನಪಾಗುತ್ತದೆ. ಮನೆಗೆ ತುಂಬಾ ಸ್ವೀಟ್ ಬಾಕ್ಸ್ ಬರುತ್ತದೆ. ಬೇರೆ ಹಬ್ಬಗಳಿಗಿಂತ ಈ ಹಬ್ಬ ಬಹಳ ಸ್ಪೆಷಲ್. ಏಕೆಂದರೆ, ಬಹಳಷ್ಟು ಜನ ಅಂಗಡಿಗಳ ಪೂಜೆಗೆ ಆಹ್ವಾನಿಸುತ್ತಾರೆ. ಹಾಗಾಗಿ, ಈ ಹಬ್ಬ ನನಗೆ ಬಹಳ ಸ್ಪೆಷಲ್. ಮಹಾನವಮಿ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಮನೆಯಲ್ಲಿ ಸಿಹಿ ತಿನಿಸುಗಳೇ ಹೆಚ್ಚು. ಚಿಕ್ಕಂದಿನಿಂದಲೂ ನನಗೆ ಸ್ವೀಟ್ ಇಷ್ಟ. ದಸರಾ ಪ್ರಯುಕ್ತ ಅಕ್ಕಪಕ್ಕದ ಮನೆಗಳಲ್ಲಿ ಪ್ರತಿಷ್ಠಾಪಿಸಿರುತ್ತಿದ್ದ ಗೊಂಬೆಗಳನ್ನು ನೋಡಲು ಹೋಗುವುದೇ ಒಂದು ಚೆಂದ. ಪ್ರತಿಮನೆಯಲ್ಲಿಯೂ ವಿಶೇಷ ಸಿಹಿ ತಿನಿಸು ಸಿಗುತ್ತಿತ್ತು. ಅದೇ ರೀತಿ ನಮ್ಮ ಮನೆಯಲ್ಲಿ ಪೂಜೆ, ಅಲಂಕಾರದ ಉಸ್ತುವಾರಿ ನನ್ನದಾದರೆ, ಅಮ್ಮನದು ಅಡುಗೆ ತಯಾರಿ ಕೆಲಸ. ಬೇರೆಬೇರೆ ಹಬ್ಬಗಳಿಗಿಂತ ದಸರಾ ನಮಗೆ ವಿಶೇಷ. ಈ ವರ್ಷ ಧಾರಾವಾಹಿ ಕೆಲಸದಲ್ಲಿ ಬಿಜಿಯಾಗಿದ್ದೇನೆ. ಹಬ್ಬ ಆಚರಣೆಗಾದರೂ ಸಮಯ ಸಿಗುತ್ತದೆಯೇ ಎಂದು ನೋಡಬೇಕಿದೆ.

| ಭವ್ಯಾ ಗೌಡ

ನಮ್ಮಲ್ಲಿ ಎಲ್ಲ ಹಬ್ಬಗಳೂ ಸರಳ

ನಾನು ಮೂಲತಃ ಮೈಸೂರಿನವಳು. ಮೈಸೂರು ಅಂದರೆ ನಾಡಹಬ್ಬದ ಸಡಗರ ಹೇಗಿರುತ್ತದೆ ಎಂದು ಇಡೀ ವಿಶ್ವಕ್ಕೇ ಗೊತ್ತು. ಬಾಲ್ಯದಿಂದಲೂ, ಆ ಸಂಭ್ರಮ ನೋಡಿ ಬೆಳೆದವಳಾದ್ದರಿಂದ ದಸರಾ ಎಂದ ತಕ್ಷಣ ಅದೇನೋ ಸಡಗರ, ಖುಷಿ. ಅಂಬಾರಿ, ಗಜಪಡೆ, ಪೂಜೆ ವಿಧಿ ವಿಧಾನಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಚಿಕ್ಕಂದಿನಿಂದಲೂ ಆ ವೈಭವವನ್ನು ಕಣ್ತುಂಬಿಕೊಳ್ಳುತ್ತಲೇ ಬರುತ್ತಿದ್ದೇವೆ. ಈಗಲೂ ಆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅಷ್ಟೇ ಉತ್ಸುಕಳಾಗಿದ್ದೇನೆ. ಮೈಸೂರಿನಲ್ಲಿ ಸಾಕಷ್ಟು ಸಾಂಸ್ಕೃ ತಿಕ ಉತ್ಸವಗಳು ನಡೆಯುತ್ತವೆ ಮತ್ತು ಅದನ್ನು ನೋಡುವುದಕ್ಕೆ ನಾನು ಪ್ರತೀವರ್ಷ ಹೋಗುತ್ತಿದ್ದೆ. ನಾನು ಸಹ ಯುವ ದಸರಾದಲ್ಲಿ ಭಾಗವಹಿಸಿದ್ದೇನೆ. ಇನ್ನು, ಮನೆಯಲ್ಲಿನ ಹಬ್ಬದ ಆಚರಣೆಗೆ ಬಂದರೆ, ನಮ್ಮ ಮನೆಯಲ್ಲಿ ಎಲ್ಲ ಹಬ್ಬಗಳನ್ನು ಸರಳವಾಗಿ ಆಚರಿಸುತ್ತೇವೆ. ಅದ್ದೂರಿ ಆಚ ರಣೆಯ ಮಾತೇ ಇಲ್ಲ. ಈ ಸಲವೂ ಸರಳವಾಗಿಯೇ ಮುಂದುವರಿ ಯಲಿದೆ.

| ರಾಧಿಕಾ ನಾರಾಯಣ್

ಡಬಲ್ ಧಮಾಕಾ

ಈ ವರ್ಷದ ದಸರಾ ಹಬ್ಬ ನನ್ನ ಪಾಲಿಗೆ ವಿಶೇಷ. ಏಕೆಂದರೆ, ನನ್ನ ಮೊದಲ ತೆಲುಗು ಸಿನಿಮಾ ‘ಪೆಳ್ಳಿ ಸಂದಡಿ’ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆ ಆಗುತ್ತಿದೆ. ಹಾಗಾಗಿ ರೀತಿ ಡಬಲ್ ಸಂಭ್ರಮದಲ್ಲಿದ್ದೇನೆ. ಇನ್ನು ಹಬ್ಬದ ವಿಚಾರಕ್ಕೆ ಬರುವುದಾದರೆ, ನಮ್ಮ ಮನೆಯಲ್ಲಿ ದಸರಾ ಆಚರಣೆ ತುಸು ಅದ್ದೂರಿಯೇ ಆಗಿರುತ್ತದೆ. ಅಮ್ಮ ಅಡುಗೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರೆ, ಪೂಜೆಯ ಅಲಂಕಾರ ನನ್ನದು. ಈದೆಲ್ಲದರ ನಡುವೆ ಸಿನಿಮಾ ಪ್ರಚಾರದಲ್ಲಿಯೂ ತೊಡಗಬೇಕು. ಕಳೆದ ವರ್ಷ ಹಬ್ಬದಾಚರಣೆ ಅಷ್ಟೊಂದು ಜೋರಾಗಿರಲಿಲ್ಲ. ಸಿನಿಮಾ ಬಿಡುಗಡೆ ದೂರದ ಮಾತಾಗಿತ್ತು. ಈ ಸಲ ಕೋವಿಡ್ ಪ್ರಮಾಣ ತಗ್ಗಿದೆ. ಚಿತ್ರಮಂದಿರಗಳೂ ತೆರೆದಿವೆ. | ಶ್ರೀಲೀಲಾ

ನಾನು ನಂಬುವ ದೇವರು ದುರ್ಗೆ

ನಾನು ದುರ್ಗಾದೇವಿಯ ಆರಾಧಕಿ. ನಾನು ನಂಬುವ ಮತ್ತು ನಡೆದುಕೊಳ್ಳುವ ದೇವರು. ಪ್ರತಿ ವರ್ಷ ಮಂಗಳೂರಿಗೆ ಹೋಗಿ ದೇವಿಯ ದರ್ಶನ ಪಡೆದು ಬರುತ್ತಿದ್ದೆ. ಆದರೆ, ಈ ಸಲ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಹೋಗಲು ಆಗುತ್ತಿಲ್ಲ. ನಮ್ಮ ಮನೆಯಲ್ಲಿಯೂ ದೇವಿ ಆರಾಧನೆ ಮಾಡಲಾಗುತ್ತದೆ. ಒಂಬತ್ತು ದಿನಗಳ ಕಾಲ ಪೂಜೆ ನಡೆಯುತ್ತದೆ. ಆದರೆ, ಅದ್ದೂರಿತನ ಇರುವುದಿಲ್ಲ. ಸರಳವಾಗಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಈ ಸಲ ಸೀರಿಯಲ್ ಸೆಟ್​ನಲ್ಲಿ ಹಬ್ಬದ ಆಚರಣೆ ಇರದಿದ್ದರೂ, ಇಡೀ ತಂಡ ಹಬ್ಬದ ಮೂಡ್​ನಲ್ಲಿದೆ. ಏಕೆಂದರೆ, ‘ಸತ್ಯ’ ಧಾರಾವಾಹಿಯು ಇತ್ತೀಚೆಗಷ್ಟೇ 200 ಸಂಚಿಕೆ ಪೂರೈಸಿ ಮುನ್ನುಗ್ಗುತ್ತಿದೆ.

| ಗೌತಮಿ ಜಾಧವ್