ಬೆಂಗಳೂರು:‘ಇಡೀ ಲೈಫ್ನ ಪಯಣ ಒಂದು ಕಡೆಯಾದರೆ, ಬಿಗ್ಬಾಸ್ನ ಜರ್ನಿ ಮತ್ತೊಂದು ಕಡೆ’- 21 ದಿನಗಳ ಕಾಲ ಬಿಗ್ ಮನೆಯಲ್ಲಿದ್ದ ಅನುಭವವನ್ನು ಹೀಗೆ ಒಂದೇ ಸಾಲಿನಲ್ಲಿ ಹೇಳಿಕೊಂಡರು ನಟಿ ಗೀತಾ ಭಾರತಿ ಭಟ್. ಬಿಗ್ಬಾಸ್ ಸೀಸನ್ 8ರ ಮೂರನೇ ವಾರದ ಎಲಿಮಿನೇಷನ್ನಲ್ಲಿ ಗೀತಾ ಮನೆಯಿಂದ ಹೊರಬಂದಿದ್ದಾರೆ. ‘ಇನ್ನಷ್ಟು ದಿನ ಇರಬೇಕಿತ್ತು..’ ಎನ್ನುವ ಅವರು ಮೂರು ವಾರಗಳ ಕಿರು ಅನುಭವವನ್ನು ವಿಜಯವಾಣಿ ಜತೆಗೆ ಹಂಚಿಕೊಂಡಿದ್ದಾರೆ. ತುಂಬ ಬೇಗ ಮನೆಯಿಂದ ಬಂದ್ರಿ ಎಂಬ ಪ್ರಶ್ನೆಗೆ ಉತ್ತರಿಸುವ ಅವರು, ‘ಬಿಗ್ಬಾಸ್ ನಿಜಕ್ಕೂ ನನ್ನ ಜೀವನದಲ್ಲಿ ಮರೆಯಲಾಗದ ಪಯಣ. ಮೂರೇ ವಾರದಲ್ಲಿ ಮರಳಿ ಬಂದೆ ಅಂತ ಬೇಜಾರಿದ್ದರೂ, ಬಿಗ್ಬಾಸ್ಗೆ ಹೋಗಿ ಬಂದೆ ಅನ್ನುವ ಖುಷಿ ಇದೆ. ಇನ್ನೂ ಎರಡ್ಮೂರು ವಾರ ಇರಬಹುದಿತ್ತು ಎಂದು ಅನಿಸಿದ್ದು ಉಂಟು. ಮನೆಯ ಇತರೆ ಮಂದಿಯಂತೆ ಎಲ್ಲರೊಂದಿಗೆ ಬೆರೆಯಲಿಲ್ಲ, ಬಹುತೇಕ ಸಮಯವನ್ನು ಅಡುಗೆ ಮನೆಯಲ್ಲಿಯೇ ಕಳೆದಿದ್ದು ನನಗೆ ಮೈನಸ್ ಆಯಿತು. ಅದರಲ್ಲೂ ನನಗೆ ಜೋರಾಗಿ ಮಾತನಾಡಲು ಬರುವುದಿಲ್ಲ. ಅನಿಸಿದ್ದನ್ನು ನೇರವಾಗಿ ಹೇಳಿಕೊಳ್ಳದೇ ಇರುವುದೂ ನಾನು ಹೊರಗೆ ಬರುವುದಕ್ಕೆ ಕಾರಣವಾಗಿದೆ ಎಂದೆನಿಸುತ್ತಿದೆ’ ಎನ್ನುತ್ತಾರವರು.
ಇದರ ಜತೆಗೆ ಟಾಸ್ಕ್ ವಿಚಾರದಲ್ಲಿ ಮತ್ತು ಸಣ್ಣ ಸಣ್ಣ ವಿಚಾರಕ್ಕೂ ಗೀತಾ ಭಾವುಕರಾಗುತ್ತಾರೆ ಎಂಬ ಮಾತು ಮನೆ ಮಂದಿಯ ಆರೋಪ. ಆ ಬಗ್ಗೆ ಸ್ಪಷ್ಟನೆ ನೀಡುವ ಗೀತಾ, ‘ಎಲ್ಲರೂ ಭಾವುಕರೇ. ನಾನು ಮೊದಲ ದಿನ ಸುದೀಪ್ ಅವರ ಮುಂದೆಯೇ ನಾನು ಭಾವುಕಳೆಂದು ಹೇಳಿದ್ದೆ. ಬಹುಶಃ ಅದನ್ನೇ ಎಲ್ಲರೂ ಟಾರ್ಗೆಟ್ ಮಾಡಿದ್ದಾರೆಂದು ನನಗನಿಸಿತು. ಮನೆಯಲ್ಲಿ ನಾನೊಬ್ಬಳೇ ಅತ್ತಿಲ್ಲ. ಎಲ್ಲರೂ ಅತ್ತಿದ್ದಾರೆ. ದಪ್ಪ ಇದ್ದೀನಿ, ಟಾಸ್ಕ್ ಮಾಡಲು ಆಗಲ್ಲ ಎಂದೂ ನನ್ನ ಮೇಲೆ ಆರೋಪಿಸಿದ್ದಾರೆ. ಅದೆಲ್ಲದರ ನಡುವೆ ನಾನು ನಾನಾಗೇ ಇದ್ದೆ. ಯಾರಿಗಾದರೂ ಪ್ರೀತಿ ತೋರಿಸಿದರೆ ಫೇಕ್ ಎನ್ನುತ್ತಿದ್ದರು. ನಾನು ಇರುವುದೇ ಹಾಗೇ. ಏನೇ ಮಾತನಾಡಿದರೂ, ಜನ ತಪು್ಪ ಹುಡುಕುತ್ತಲೇ ಇರುತ್ತಾರೆ. ಇದೆಲ್ಲವನ್ನು ಬದಿಗಿಟ್ಟರೆ 21 ದಿನವನ್ನು ತುಂಬ ಖುಷಿಯಿಂದ ಕಳೆದಿದ್ದೇನೆ. ಫೋನ್ ಇಲ್ಲದೆ ಇರಬಹುದು ಎಂಬುದನ್ನು ಬಿಗ್ಬಾಸ್ ಕಲಿಸಿದೆ. ಇದೀಗ ಮನೆಗೆ ಬಂದಿದ್ದೇನೆ. ಈಗಲೂ ಬಿಗ್ಬಾಸ್ನಲ್ಲಿದ್ದೇನೆ ಎಂದೇ ಫೀಲ್ ಆಗುತ್ತಿದೆ. ಅದರ ಹ್ಯಾಂಗೋವರ್ನಿಂದ ಹೊರಬರಬೇಕೆಂದರೆ ಸುಮಾರು ದಿನಗಳು ಬೇಕು’ ಎಂಬುದು ಗೀತಾ ಮಾತು. ‘ಅರವಿಂದ್, ಮಂಜು, ಶುಭಾ, ದಿವ್ಯಾ ಮತ್ತು ರಾಜೀವ್ ಕೊನೆಯವರೆಗೂ ಬಿಗ್ಬಾಸ್ನಲ್ಲಿರಲಿದ್ದಾರೆ’ ಎನ್ನುವ ಗೀತಾ, ಸಿನಿಮಾ ಮತ್ತು ಸೀರಿಯಲ್ ಕ್ಷೇತ್ರದಲ್ಲಿಯೇ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಡುಗಾರಿಕೆಯಲ್ಲಿಯೂ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.