ಕೆಲವು ವರ್ಷಗಳ ಹಿಂದೆ ಕಂಬಳ ಬೇಕೋ, ಬೇಡವೋ ಎಂದು ದೊಡ್ಡ ಚರ್ಚೆಯಾಗಿದ್ದು ನೆನಪಿರಬಹುದು? ಈ ವಿಷಯ ಕೋರ್ಟ್ ಮೆಟ್ಟಿಲೇರಿದ್ದು ಸಹ ನೆನಪಿರಬಹುದು. ಈಗ ಅದೇ ವಿಷಯವನ್ನು ಬಾಬು ತಮ್ಮ ‘ವೀರ ಕಂಬಳ’ ಎಂಬ ಪ್ಯಾನ್ ಇಂಡಿಯಾ ಚಿತ್ರದ ಮೂಲಕವೂ ರ್ಚಚಿಸಿದ್ದಾರೆ. ಕಂಬಳದ ಪರವಾಗಿ ಮಾತನಾಡುವುದಕ್ಕೆ ಪ್ರಕಾಶ್ ರೈ, ಪ್ರಾಣಿ ದಯಾ ಸಂಘಗಳ ಪರವಾಗಿ ವಾದ ಮಾಡುವುದಕ್ಕೆ ರವಿಶಂಕರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಇಬ್ಬರು ಪ್ರತಿಭಾವಂತ ನಟರು ನಟಿಸಿದ ಪ್ರಮುಖ ದೃಶ್ಯಗಳನ್ನು ಬಾಬು ಇತ್ತೀಚೆಗೆ ಚಿತ್ರೀಕರಿಸಿಕೊಂಡಿದ್ದಾರೆ.
ಚಿತ್ರೀಕರಣದ ಬಿಡುವಿನಲ್ಲಿ ಈ ಕುರಿತು ಮಾತನಾಡಿದ ರಾಜೇಂದ್ರ ಸಿಂಗ್ ಬಾಬು, ‘ಒಂಬತ್ತು ತಿಂಗಳಿನಿಂದ ಸಾಕಷ್ಟು ಚರ್ಚೆ ನಡಿಸಿ, ಹಲವರಿಂದ ಮಾಹಿತಿ ಸಂಗ್ರಹಿಸಿ ಈಗ ಚಿತ್ರೀಕರಣ ಮುಗಿಸಿದ್ದೇವೆ. ನಾವೇನೇ ಬರೆದಿಟ್ಟುಕೊಂಡರೂ ಪ್ರಕಾಶ್ ಮತ್ತು ರವಿ ಅವರ ಅಭಿನಯ, ಈ ದೃಶ್ಯದ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ’ ಎನ್ನುತ್ತಾರೆ. ಈ ಚಿತ್ರಕ್ಕೆ ಸುಮಾರು ಎರಡು ವರ್ಷಗಳ ಕಾಲ ಸ್ಕ್ರಿಪ್ಟ್ ಮಾಡಿದ್ದಾಗಿ ಹೇಳುತ್ತಾರೆ ಬಾಬು. ‘10-15 ಕಂಬಳಗಳಿಗೆ ಭೇಟಿ ಕೊಟ್ಟು, ಅಲ್ಲಿನ ತಜ್ಞರು, ಮಾಲೀಕರು ಮತ್ತು ಜಾಕಿಗಳನ್ನು ಮಾತಾಡಿಸಿದ್ದೇವೆ. 800 ವರ್ಷಗಳ ಕ್ರೀಡೆ ಇದು. ಪ್ರತಿಯೊಂದನ್ನೂ ಗಮನಿಸಿ, ಯಾವುದೇ ಚ್ಯುತಿ ಬರದಂತೆ ಮಾಡಿದ್ದೇವೆ’ ಎನ್ನುತ್ತಾರೆ.
ಇದುವರೆಗೂ ಹಲವು ಕೋರ್ಟ್ ದೃಶ್ಯಗಳಲ್ಲಿ ಭಾಗವಹಿಸಿದ್ದರೂ ಇದು ಬೇರೆ ಎನ್ನುವ ಪ್ರಕಾಶ್ ರೈ, ‘ಇದು ನನ್ನ ಮಣ್ಣಿನ ವಿಷಯ. ಇಲ್ಲಿ ಬರೀ ನನ್ನ ಸಂಭಾಷಣೆಯಷ್ಟೇ ಅಲ್ಲ, ನನ್ನ ಭಾವನೆಗಳೂ ಮುಖ್ಯವಾಗುತ್ತವೆ. ಬೇರೆ ಚಿತ್ರಗಳಲ್ಲಿ ನಾನು ಒಬ್ಬ ನಟನಾಗಿ ನನ್ನ ಪಾತ್ರ ಮಾಡಿರುತ್ತೇನೆ ಅಷ್ಟೇ. ಇಲ್ಲಿ ಒಬ್ಬ ಕನ್ನಡಿಗನಾಗಿ, ಒಬ್ಬ ತುಳುವನಾಗಿ ಬೇರೆ ಜವಾಬ್ದಾರಿ ಇರುತ್ತದೆ’ ಎನ್ನುತ್ತಾರೆ.