ಬೆಂಗಳೂರು: ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಜ. 7ಕ್ಕೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಶುಕ್ರವಾರ ಬೆಂಗಳೂರಿಗೆ ಆಗಮಿಸಿತ್ತು. ಚಿತ್ರದ ಬಗ್ಗೆ, ಡಬ್ಬಿಂಗ್ ಬಗ್ಗೆ, ಕನ್ನಡ-ಕರ್ನಾಟಕದ ಬಗ್ಗೆ, ಪುನೀತ್ ಬಗ್ಗೆಯೂ ಎಲ್ಲರೂ ಮಾತನಾಡಿದರು. ಜೂ. ಎನ್ಟಿಆರ್, ಪುನೀತ್ ಹಾಡು ಗುನುಗಿದರು. ‘ಚಕ್ರವ್ಯೂಹ’ ಚಿತ್ರದ ‘ಗೆಳೆಯ ಗೆಳೆಯ ...’ ಹಾಡು ಹೇಳಿ, ‘ಇನ್ನೆಂದೂ ಈ ಹಾಡನ್ನು ಹೇಳುವುದಿಲ್ಲ. ಪುನೀತ್ ಇಲ್ಲದ ಕರ್ನಾಟಕ ನನಗೆ ಶೂನ್ಯ’ ಎಂದು ಕನ್ನಡದಲ್ಲಿಯೇ ಮಾತನಾಡುತ್ತ ಭಾವುಕರಾದರು.
ಅದೇ ರೀತಿ ರಾಜಮೌಳಿ, ರಾಮ್ಚರಣ್ ತೇಜ ಮತ್ತು ಆಲಿಯಾ ಭಟ್ ಕನ್ನಡದಲ್ಲಿ ಮಾತು ಆರಂಭಿಸಿದರು. ‘ಬಾಹುಬಲಿ’ ಚಿತ್ರದ ಬಿಡುಗಡೆ ವೇಳೆ ಆದ ನಿಂದನೆ ಈ ಚಿತ್ರಕ್ಕೂ ಆಗಬಾರದೆಂಬ ಕಾರಣಕ್ಕೆ ಕನ್ನಡ ಅವತರಣಿಕೆಗೆ ಎನ್ಟಿಆರ್ ಮತ್ತು ರಾಮ್ರಣ್ ತೇಜ ಅವರಿಂದಲೇ ಡಬ್ಬಿಂಗ್ ಮಾಡಿಸಿದ್ದಾರೆ ರಾಜಮೌಳಿ. ‘ಒಳ್ಳೇ ಕಥೆಯನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದೇವೆ. ಅದೇ ಈ ಚಿತ್ರದ ಹೀರೋ’ ಎಂದು ನಿರ್ದೇಶಕರು ಹೇಳಿದರು. ತಮ್ಮ ಸಿನಿಮಾಗಳಿಗೆ ಕಥೆಯ ವಿಚಾರದಲ್ಲಿ ಬೆನ್ನೆಲುಬಾಗಿ ನಿಂತ ಅಪ್ಪ ವಿಜಯೇಂದ್ರ ಪ್ರಸಾದ್ ಅವರನ್ನೂ ರಾಜಮೌಳಿ ನೆನೆದರು. ಆಲಿಯಾ ಹೆಚ್ಚು ಮಾತುಗಳನ್ನಾಡಲಿಲ್ಲ. ದಾನಯ್ಯ ನಿರ್ವಣದ ಈ ಚಿತ್ರವನ್ನು ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ.