ಬೆಂಗಳೂರು: 15 ವರ್ಷಗಳ ಯಶಸ್ಸಿನ ಸಂಭ್ರಮದಲ್ಲಿರುವ ಜೀ ಕನ್ನಡ ವಾಹಿನಿ ತನ್ನ ಕುಟುಂಬದ ಅತ್ಯಂತ ದೊಡ್ಡ ಹಬ್ಬವಾದ ‘ಜೀ ಕುಟುಂಬ ಅವಾರ್ಡ್ಸ್ 2021’ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಥವೊಂದನ್ನು ಸಿದ್ಧಪಡಿಸಲಾಗಿದ್ದು, ಆ ರಥವು ರಾಜ್ಯಾದ್ಯಂತ ಪ್ರಯಾಣ ಮಾಡಿ, ಜೀ ಕುಟುಂಬ ಪ್ರಶಸ್ತಿಗಳ ಕುರಿತು ಪ್ರಚಾರ ನಡೆಸಲಿದೆ. ‘ನಾದಬ್ರಹ್ಮ’ ಹಂಸಲೇಖ ಬಾವುಟ ಹಾರಿಸುವ ಮೂಲಕ ಈ ರಥಕ್ಕೆ ಚಾಲನೆ ನೀಡಿದ್ದಾರೆ. ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಅನಿರುದ್ಧ, ಮೇಘಾ ಶೆಟ್ಟಿ, ಮೋಕ್ಷಿತಾ ಪೈ, ಗೌತಮಿ ಜಾಧವ್, ಶರತ್, ಸಾಗರ್ ಸೇರಿದಂತೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳ ಜನಪ್ರಿಯ ಕಲಾವಿದರು ಭಾಗವಹಿಸಿದ್ದರು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿರುವ ಈ ವಾಹನವು, ಜೀ ಕನ್ನಡದಲ್ಲಿ ಪ್ರಸಾರವಾಗುವ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಲಿದೆ.
ಅಷ್ಟೇ ಅಲ್ಲ, ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವುದಕ್ಕೆ ಉತ್ತೇಜಿಸಲಿದೆ. ಜೀ5 ಆಪ್ ಮೂಲಕ ಡಿಜಿಟಲ್ ವೋಟಿಂಗ್ ಮಾಡುವುದಕ್ಕೆ ಅವಕಾಶ ನೀಡಲಾಗಿದ್ದು, ವೀಕ್ಷಕರು ತಮ್ಮ ಮೆಚ್ಚಿನ ನಟ-ನಟಿಯರು ಮತ್ತು ತಂತ್ರಜ್ಞರನ್ನು ಈ ಆಪ್ನ ಮೂಲಕ ಆಯ್ಕೆ ಮಾಡಬಹುದು. ಹಾಗೆ ವೀಕ್ಷಕರಿಂದ ಆಯ್ಕೆಯಾದ ಅರ್ಹರಿಗೆ, ಜೀ ಕನ್ನಡ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ. ಈ ಕಾರ್ಯಕ್ರಮದ ಬಗ್ಗೆ ಮಾತನಾಡುವ ಜೀ ಕನ್ನಡ ಮತ್ತು ಜೀ ಪಿಚ್ಚರ್ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು, ‘ಜೀ ಕುಟುಂಬ ಅವಾರ್ಡ್ಸ್ ವರ್ಷದಿಂದ ವರ್ಷಕ್ಕೆ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡು ಕನ್ನಡ ಕಿರುತೆರೆ ವೀಕ್ಷಕರು ಕಾತುರದಿಂದ ನಿರೀಕ್ಷಿಸುವ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ತಮ್ಮ ಪ್ರತಿಭೆಯಿಂದ ವೀಕ್ಷಕರನ್ನು ರಂಜಿಸುವ ಕುಟುಂಬದ ತಾರೆಯರನ್ನು, ತಂತ್ರಜ್ಞರನ್ನು ಮತ್ತು ಹಲವು ವಿಭಾಗದ ಶ್ರಮಿಕರನ್ನು ಗೌರವಿಸುವುದು ಜೀ ಕನ್ನಡ ವಾಹಿನಿಗೆ ಹೆಮ್ಮೆಯ ವಿಷಯ’ ಎಂದಿದ್ದಾರೆ.
ರಿಂಗ್ ಮಾಸ್ಟರ್ ರಾಘವೇಂದ್ರ ...: ವಾಹಿನಿ ಮತ್ತು ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರ ಬಗ್ಗೆ ಮಾತನಾಡಿದ ಹಂಸಲೇಖ, ‘ನನ್ನ ಜೀವನದಲ್ಲಿ ಮೂರು ‘ಆರ್’ಗಳು ತುಂಬ ಕೆಲಸ ಮಾಡಿವೆ. ರವಿಚಂದ್ರನ್, ರಾಜಕುಮಾರ್, ಮೂರನೆಯವರು ರಾಘವೇಂದ್ರ ಹುಣಸೂರು. ಅವರು ರಿಂಗ್ ಮಾಸ್ಟರ್ ಇದ್ದಂತೆ. ಅಚ್ಚುಕಟ್ಟಾಗಿ ವಾಹಿನಿ ಯನ್ನು ಮುನ್ನಡೆಸುತ್ತಿದ್ದಾರೆ. ವಾಹಿನಿಯಲ್ಲಿ ಸಂಗೀತಕ್ಕೆ ವಿಶ್ವವಿದ್ಯಾಲಯದ ರೂಪ ಕೊಟ್ಟಿದ್ದಾರೆ. ಅವರ ಕಾರ್ಯ ಇನ್ನೂ ಉನ್ನತಮಟ್ಟಕ್ಕೇರಲಿ’ ಎಂದು ಹೇಳಿದ್ದಾರೆ.