ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಏಪ್ರಿಲ್ 01ಕ್ಕೆ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಶನಿವಾರ ಮಧ್ಯಾಹ್ನ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಟೆನ್ಶನ್ ಹೆಚ್ಚಾಗುತ್ತಿದೆ ಎಂದಿದ್ದಾರೆ ಪುನೀತ್.
‘ಯುವರತ್ನ’ ಟ್ರೇಲರ್ ಬಿಡುಗಡೆಯಾದ ನಂತರ ಮಾತನಾಡಿರುವ ಅವರು, ‘ಸಿನಿಮಾ ಶುರುವಾದಾಗ ಬಹಳ ಖುಷಿಯಿತ್ತು. ಅದ್ಭುತವಾದ ಕಲಾವಿದರಿದ್ದರು. ಒಳ್ಳೊಳ್ಳೆಯ ಲೊಕೇಶನ್ಗಳಲ್ಲಿ ಚಿತ್ರೀಕರಣವಾಯಿತು. ಇನ್ನು, ನಾವು ಕಳೆದ ಕ್ಷಣಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಈಗ ಚಿತ್ರ ಬಿಡುಗಡೆ ಹತ್ತಿರ ಬರುತ್ತಿದ್ದಂತೆಯೇ ಟೆನ್ಶನ್ ಶುರುವಾಗಿದೆ. ಯುದ್ಧಕ್ಕೆ ಇಳಿದಿದ್ದೀವಿ. ಏನಾಗುತ್ತದೋ ಗೊತ್ತಿಲ್ಲ. ಆದರೆ, ಒಂದು ವಿಷಯದಲ್ಲಿ ಬಹಳ ಖುಷಿ ಇದೆ. ಒಂದೊಳ್ಳೆಯ ಸಿನಿಮಾ ಮಾಡಿದ್ದೀವಿ ಮತ್ತು ಆ ಸಿನಿಮಾದಲ್ಲಿ ನಾನೊಂದು ಪಾತ್ರ ಮಾಡಿರುವುದು ಇನ್ನೂ ಖುಷಿ ಇದೆ’ ಎನ್ನುತ್ತಾರೆ ಪುನೀತ್.
ಇದು ಸಂತೋಷ್ ಆನಂದರಾಮ್ ಅವರ ಕನಸು ಎನ್ನುವ ಪುನೀತ್, ‘ಈ ಚಿತ್ರದಲ್ಲಿ ಹೇಳಿರುವ ವಿಷಯಗಳಿರಬಹುದು, ಮೌಲ್ಯಗಳಿರಬಹುದು ಅವೆಲ್ಲ ಸಂತೋಷ್ ಅವರದ್ದು. ನನ್ನ, ಸಂತೋಷ್ ಮತ್ತು ಹೊಂಬಾಳೆ ಕಾಂಬಿನೇಶನ್ನಲ್ಲಿ ಇಂಥದ್ದೊಂದು ಸಿನಿಮಾ ಮೂಡಿಬಂದಿರುವುದು ಖುಷಿಯಾಯಿತು’ ಎನ್ನುತ್ತಾರೆ ಪುನೀತ್. ಈ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ವಪಕ ವಿಜಯ್ಕುಮಾರ್ ಕಿರಗಂದೂರು, ಧನಂಜಯ್ ಪ್ರಕಾಶ್ ರೈ, ಅವಿನಾಶ್, ರಂಗಾಯಣ ರಘು, ಸುಧಾರಾಣಿ, ನಟರಂಗ ರಾಜೇಶ್, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪುನೀತ್ಗೆ ‘ನೃಪತುಂಗ’ ಚಿತ್ರ ಮಾಡಿ ಎಂದು ರಂಗಾಯಣ ರಘು ವಿಶೇಷ ಮನವಿ ಮಾಡಿದರು. ‘ಡಾ. ರಾಜಕುಮಾರ್ ಎಲ್ಲ ತರಹದ ಪಾತ್ರಗಳನ್ನು ಮಾಡಿದರು. ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಎಲ್ಲವೂ ಮಾಡಿದರು. ಎಲ್ಲ ಸಂತರ ಪಾತ್ರಗಳಲ್ಲೂ ಅಭಿನಯಿಸಿದರು. ರಾಕ್ಷಸರ ಪಾತ್ರವನ್ನೂ ಮಾಡಿದರು. ಆದರೆ, ಎರಡು ಚಿತ್ರಗಳನ್ನು ಮಾಡಲಾಗಲಿಲ್ಲ. ಒಂದು ‘ಭಕ್ತ ಅಂಬರೀಶ’. ಇನ್ನೊಂದು ‘ನೃಪತುಂಗ’. ಎರಡೂ ಚಿತ್ರಗಳ ಘೋಷಣೆ ಆದರೂ, ಚಿತ್ರ ಮುಂದುವರೆ ಯಲಿಲ್ಲ. ‘ಭಕ್ತ ಅಂಬರೀಶ’ ಚಿತ್ರವನ್ನು ಶಿವಣ್ಣ ಮಾಡಲಿ. ನೀವು ‘ನೃಪತಂಗ’ ಮಾಡಿ. ಈ ಮೂಲಕ ಎಲ್ಲರ ಆಸೆಯನ್ನು ಪೂರೈಸಿ’ ಎಂದು ರಂಗಾಯಣ ರಘು ಹೇಳಿದರು.