ಸಿನಿವಾಣಿ

ಯುವ ಮಾಸ್ ಎಂಟ್ರಿ: ಅಪ್ಪ-ಚಿಕ್ಕಪ್ಪನ ಸಮ್ಮುಖದಲ್ಲಿ ಚಂದನವನಕ್ಕೆ ಆಗಮನ

ಬೆಂಗಳೂರು: ಡಾ. ರಾಜ್ ಕುಟುಂಬದ ಕುಡಿ, ರಾಘವೇಂದ್ರ ರಾಜಕುಮಾರ್ ಮಗ ಯುವ ರಾಜಕುಮಾರ್ ಚಂದನವನಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಹಬ್ಬಿತ್ತು. ರಾಜ್ ಜನ್ಮದಿನದಂದು ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆ ಆಗಿತ್ತು. ಆದರೆ, ಸಿನಿಮಾ ಶೀರ್ಷಿಕೆ ಏನು ಎಂಬ ಬಗ್ಗೆ ಮಾತ್ರ ಚಿತ್ರತಂಡ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಇದೀಗ ಆ ಕಾತರಕ್ಕೆ ತೆರೆಬಿದ್ದಿದೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯುವ ರಾಜಕುಮಾರ್ ನಟಿಸುತ್ತಿರುವ ಚಿತ್ರಕ್ಕೆ ‘ಯುವ ರಣಧೀರ ಕಂಠೀರವ’ ಶೀರ್ಷಿಕೆ ಇಡಲಾಗಿದೆ. ತಂದೆ ರಾಘವೇಂದ್ರ ರಾಜಕುಮಾರ್, ಚಿಕ್ಕಪ್ಪ ಪುನೀತ್ ಸಮ್ಮುಖದಲ್ಲಿ ಚಿತ್ರದ ಲಾಂಚಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಅಂದಹಾಗೆ, ಈ ಹಿಂದೆ ‘ಕೆಜಿಎಫ್’ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದ ಪುನೀತ್ ರುದ್ರನಾಗ್ ಈ ಸಿನಿಮಾಕ್ಕೆ ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.

ಫ್ಯಾಂಟಸಿ ಶೈಲಿಯಲ್ಲಿ ಸಿದ್ಧವಾಗಲಿರುವ ಈ ಸಿನಿಮಾ, ಸದ್ಯಕ್ಕೆ ಚಿತ್ರೀಕರಣ ಪೂರ್ವಕೆಲಸಗಳಲ್ಲಿ ತೊಡಗಿಸಿಕೊಂಡಿದೆ. 2021ರಲ್ಲಿ ಚಿತ್ರೀಕರಣಕ್ಕೆ ಧುಮುಕಲಿದೆ. ಟ್ರೇಲರ್​ನಲ್ಲಿ ಮಾಸ್ ಅವತಾರದಲ್ಲಿ ಯುವ ಎದುರಾಗಿದ್ದಾರೆ. ಹಿನ್ನೆಲೆ ಸಂಗೀತದ ಮೂಲಕವೇ ರವಿ ಬಸ್ರೂರು ಐದು ನಿಮಿಷದ ಲಾಂಚಿಂಗ್ ವಿಡಿಯೋದಲ್ಲಿ ಮೋಡಿ ಮಾಡಿದ್ದಾರೆ. ಮೋಹನ್ ಬಿ. ಕೆರೆಯಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಿ ಈ ಟೀಸರ್ ಚಿತ್ರೀಕರಿಸಲಾಗಿದ್ದು, ಬಹುತೇಕ ವಿಎಫ್​ಎಕ್ಸ್ ಬಳಸಿಕೊಂಡು ಸಿನಿಮಾ ಸಿದ್ಧವಾಗಲಿದೆ.

ನಮ್ಮ ಮಕ್ಕಳ ಬಗ್ಗೆ ನಾವೇ ಮಾತನಾಡಿದರೆ ಅದು ಸ್ವಾರ್ಥ ಆಗುತ್ತದೆ. ಹಾಗಾಗಿ ನಾನೇನು ಹೆಚ್ಚು ಹೇಳುವುದಿಲ್ಲ. ನಮ್ಮ ಅಪ್ಪಾಜಿ ಎಲ್ಲೂ ಹೋಗಿಲ್ಲ. ಇಲ್ಲಿಯೇ ಇದ್ದಾರೆ. ಯುವ ನೊಳಗಿದ್ದಾರೆ.

| ರಾಘವೇಂದ್ರ ರಾಜಕುಮಾರ್

ನಮ್ಮ ಮನೆ ಮಗನ ಬಗ್ಗೆ ಏನೇ ಮಾತನಾಡಿದರೂ ಹೆಚ್ಚೇ ಮಾತನಾಡಿದ ಹಾಗಿರುತ್ತದೆ. ಆತನೊಳಗಿನ ಪ್ರತಿಭೆ ಏನಿದೆ ಎಂಬುದನ್ನು ನಿರ್ದೇಶಕರು ಹೊರತೆಗೆದಿದ್ದಾರೆ. ಕಷ್ಟಪಟ್ಟಿದ್ದಾನೆ, ಫೈಟ್ ಚೆನ್ನಾಗಿ ಮಾಡಿದ್ದಾನೆ. ಪ್ರೇಕ್ಷಕನಾಗಿ ನಾನು ಇಷ್ಟಪಟ್ಟಿದ್ದು ಅವನ ಮಾತುಗಳು. ಎಲ್ಲೋ ಒಂದು ಕಡೆ ನಮ್ಮ ತಂದೆ ನೆನಪಾದರು.

| ಪುನೀತ್ ರಾಜಕುಮಾರ್