ಬೆಂಗಳೂರು: ಗುರು ದೇಶಪಾಂಡೆ ನಿರ್ಮಾಣ ಮತ್ತು ನಿರ್ದೇಶನದ ‘ಪೆಂಟಗನ್’ ಸಿನಿಮಾದ ನಟಿ ತನಿಶಾ ಕುಪ್ಪಂಡ ಅವರ ಬಳಿ ಅಶ್ಲೀಲ ಪ್ರಶ್ನೆ ಕೇಳುವ ಮೂಲಕ ಯೂಟ್ಯೂಬರ್ ಓರ್ವ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾನೆ. ಪ್ರಶ್ನೆಯಿಂದ ಮುಜಗರಕ್ಕೀಡಾದ ನಟಿ ಮತ್ತು ಚಿತ್ರತಂಡ ಯೂಟ್ಯೂಬರ್ನನ್ನು ತರಾಟೆಗೆ ತೆಗೆದುಕೊಂಡಿತು.
ಪೆಂಟಗನ್ ಸಿನಿಮಾ ಏಪ್ರಿಲ್ 7ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ನಟಿ ತನಿಶಾ ಕುಪ್ಪಂಡ ಅವರನ್ನು ಸಂದರ್ಶಿಸಲು ಯೂಟ್ಯೂಬರ್ ಬಂದಿದ್ದ. ಸಿನಿಮಾ ಕುರಿತಾದ ಪ್ರಶ್ನೆಗಳು ಮಧ್ಯೆ ನೀವು ಬ್ಲೂ ಫಿಲ್ಮ್ನಲ್ಲಿ ನಟಿಸುತ್ತಿರಾ? ಎಂದು ಯೂಟ್ಯೂಬರ್ ನಟಿ ಪ್ರಶ್ನೆ ಮಾಡಿದ್ದಾರೆ.
ಯೂಟ್ಯೂಬರ್ ಪ್ರಶ್ನೆಯಿಂದ ಕೆರಳಿದ ನಟಿ ತನಿಶಾ, ನಾನು ಬ್ಲೂ ಫಿಲ್ಮ್ ಮಾಡೋ ಆಗಿದ್ರೆ ಕನ್ನಡ ಇಂಡಸ್ಟ್ರಿಗೆ ಯಾಕೆ ಬರಬೇಕಿತ್ತು. ಪೋರ್ನ್ ಇಂಡಸ್ಟ್ರಿಗೆ ಹೋಗುತ್ತಿದ್ದೆ. ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದೇವೆ ಅಂದ ಮಾತ್ರಕ್ಕೆ ಬ್ಲೂ ಫಿಲ್ಮ್ ಮಾಡೋಕೆ ಆಗುತ್ತಾ? ಅದಕ್ಕೆ ಅಂತ ಪೋರ್ನ್ ಸ್ಟಾರ್ಸ್ ಇದ್ದಾರೆ. ನಾನೇನು ಪೋರ್ನ್ ಸಿನಿಮಾ ನಾಯಕಿಯಾ? ನೀವೇಕೆ ಈ ರೀತಿಯ ಪ್ರಶ್ನೆ ಮಾಡುತ್ತೀರಿ? ಈ ರೀತಿಯಲ್ಲಿ ನೀವು ಕೇಳಬಾರದು. ಏನೇ ಪ್ರಶ್ನೆ ಮಾಡುವಾಗ ಕನಿಷ್ಠ ಜ್ಞಾನ ಇರಬೇಕು. ಕನ್ನಡ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡುತ್ತಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಗಳನ್ನು ಕೇಳುತ್ತೀರಿ? ಎಂದು ತನಿಶಾ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು.
ಈ ವೇಳೆ ಬಾಲಿವುಡ್ ಹೆಸರೇಳಿದ ಯೂಟ್ಯೂಬರ್ಗೆ ಮತ್ತೆ ಜಾಡಿಸಿದ ತನಿಶಾ, ಬಾಲಿವುಡ್ನಲ್ಲಿ ಯಾರು ಬೆತ್ತಲೆಯಾಗಿ ನಟಿಸಿದ್ದಾರೆ. ನೀವು ಓರ್ವ ಕಲಾವಿದೆ ಜತೆ ಮಾತನಾಡುವಾಗ ಪ್ರಜ್ಞೆ ಇರಬೇಕು. ಯಾರು ಪೋರ್ನ್ ಫಿಲ್ಮ್ ಮಾಡುತ್ತಾರೆ ಅನ್ನೋ ಸಾಮಾನ್ಯ ತಿಳುವಳಿಕೆ ನಿಮಗೆ ಇಲ್ವಾ? ಎಂದು ತನಿಶಾ ತರಾಟೆಗೆ ತೆಗೆದುಕೊಂಡರು. ಇದಾದ ಬಳಿಕ ಪೆಂಟಗನ್ ಚಿತ್ರತಂಡವು ಕೂಡ ಯೂಟ್ಯೂಬರ್ಗೆ ಕ್ಲಾಸ್ ತೆಗೆದುಕೊಂಡಿತು.
ಇನ್ನು ತನಿಷಾ ಅವರು ಪೆಂಟಗನ್ ಹಾಡೊಂದರಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯೂಟ್ಯೂಬರ್ ಈ ಪ್ರಶ್ನೆ ಕೇಳಿದ್ದಾರೆ. ಇದೀಗ ನಟಿ ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಸಿನಿಮಾ ವಿಚಾರಕ್ಕೆ ಬಂದರೆ, ‘ಪೆಂಟಗನ್’, ಒಂದೇ ಚಿತ್ರದಲ್ಲಿ ಐದು ಕಥೆಗಳನ್ನು ಹೇಳುವ ಅಂಥಾಲಜಿ ಸಿನಿಮಾ. ಈ ಚಿತ್ರವನ್ನು ನಿರ್ದೇಶಕ ಕಮ್ ಗುರು ದೇಶಪಾಂಡೆ ತಮ್ಮ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದು, ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ಒಂದೊಂದು ಕಥೆಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರಗಳಲ್ಲಿ ಹಿರಿಯ ನಟ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅನುಷಾ ರೈ, ವಂಶಿಕೃಷ್ಣ, ಅಪೂರ್ವ ಮುಂತಾದವರು ಅಭಿನಯಿಸಿದ್ದು, ಜಿ.ಅಕಾಡೆಮಿಯ ಒಂದಷ್ಟು ವಿದ್ಯಾರ್ಥಿಗಳು ಸಹ ಇದರಲ್ಲಿ ಕೆಲಸ ಮಾಡಿದ್ದಾರೆ.