ತೈಪೆ: ನೋಡಲು ಸಹೋದರಿಯರಂತೆ ಕಾಣುವ ತೈವಾನ್ ದೇಶದ ಇಬ್ಬರು ಸುಂದರಿಯರು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಆದರೆ, ಈ ಇಬ್ಬರು ಕೂಡ ಸಹೋದರಿಯರಲ್ಲ, ಬದಲಾಗಿ ಅಮ್ಮ-ಮಗಳೆಂಬುದು ನೆಟ್ಟಿಗರನ್ನು ಒಂದು ಕ್ಷಣ ಹುಬ್ಬೇರಿಸುವುದಂತೂ ಸತ್ಯ.
ಐಮೀ ಸನ್ ಯುನ್ಯುನ್ ಎಂಬಾಕೆಗೆ 41ರ ಹರೆಯ. ಈಕೆಯ ಮಗಳು ಟ್ರಿನಿಟಿ ಲಿಯೋಗೆ ಕೇವಲ 20 ವರ್ಷ ಮಾತ್ರ. ಅಮ್ಮ ಮತ್ತು ಮಗಳಿನ ನಡುವೆ 21 ವರ್ಷ ವಯಸ್ಸಿನ ಅಂತರವಿದೆ. ಆದೆ, ನೋಡಲು ಸಹೋದರಿಯರಂತೆ ಕಾಣುವ ಅಮ್ಮ-ಮಗಳ ಜೋಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ, ಇವರು ಸೋಶಿಯಲ್ ಮೀಡಿಯಾ ಸ್ಟಾರ್ ಕೂಡ ಆಗಿದ್ದಾರೆ.
ಪ್ರತಿನಿತ್ಯ ಚಾಚೂ ತಪ್ಪದೇ ಪಾಲಿಸುವ ಚರ್ಮ ಪೋಷಣೆ, ತರಕಾರಿ ಮತ್ತು ಸೇಬು ಜ್ಯೂಸ್ ಮೇಲಿನ ಅತೀವ ಪ್ರೀತಿ ಐಮೀ ಸನ್ ಯುನ್ಯುನ್ ಅವರ ಚಿರ ಯೌವ್ವನದ ಗುಟ್ಟಾಗಿದೆ.
ಐಮೀ ಸನ್ ಯುನ್ಯುನ್ ಅವರು 1978ರಲ್ಲಿ ತೈಪೆಯಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಏಷ್ಯಾದ ಆರಂಭಿಕ ಮೊಬೈಲ್ ನೆಟ್ವರ್ಕ್, ತೈವಾನ್ ಮೊಬೈಲ್ನ ಸಂಸ್ಥಾಪಕರಾಗಿದ್ದಾರೆ. ತಾಯಿ ಇನ್ವೆಸ್ಟ್ಮೆಂಟ್ ಬ್ಯಾಂಕ್ ಯುಂತಾ ಸೆಕ್ಯುರಿಟೀಸ್ನ ಡೆಪ್ಯುಟಿ ಚೇರ್ಮನ್ ಆಗಿದ್ದಾರೆ.
ಐಮೀ ಸನ್ ಯುನ್ಯುನ್ ಪತಿ ಹೆನ್ರಿ ಲಿಯಾ ತೈಪೆಯಲ್ಲಿ ಯಶಸ್ವಿ ಉದ್ಯಮಿಯಾಗಿದ್ದು, ಯುನ್ಗಿಂತ ಏಳು ವರ್ಷ ಹಿರಿಯರು. ಯುನ್ 21ನೇ ವಯಸ್ಸಿನಲ್ಲಿ ಮದುವೆಯಾದರು. ದಂಪತಿಗೆ ಒಂದು ಗಂಡು ಮತ್ತು ಹೆಣ್ಣು ಮಕ್ಕಳಿದ್ದಾರೆ. ಯುನ್ ತೈಪೆ ಮೂಲದ ರೀಟೈಲ್ ಗ್ರೂಪ್ನ ಫ್ಯಾಶನ್ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ತನ್ನ ಸ್ವಂತ ಜ್ಯುವೆಲರಿ ಬ್ರ್ಯಾಂಡ್ನ ಸಹಸಂಸ್ಥಾಪಕಿಯು ಆಗಿದ್ದಾರೆ.
ಈವರೆಗೂ ಮಾಧ್ಯಮಗಳ ಕಣ್ಣಿಗೆ ಬೀಳದ ಯುನ್, ಇತ್ತೀಚೆಗೆ ತಮ್ಮ ಮಗಳು ಟ್ರಿನಿಟಿ ಡಿಯೋ ಜತೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಕಳೆದ ವರ್ಷದ ಅಂತಿಮದಲ್ಲಿ ಡಿನ್ನರ್ ಪಾರ್ಟಿಯೊಂದರಲ್ಲಿ ತೆಗೆದಿದ್ದ ಫೋಟೋವನ್ನು ಮಗಳು ತನ್ನ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡು ಹೆಮ್ಮೆಯ ತಾಯಿ ಎಂದು ಬರೆದುಕೊಂಡಿದ್ದಳು. ಇದು ನೆಟ್ಟಿಗರ ಕಣ್ಣಿಗೆ ಬಿದ್ದು ಅಂದಿನಿಂದ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.
ಅಮ್ಮ ಮತ್ತು ಮಗಳು ಇಬ್ಬರು ಇನ್ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದು ಸಾಕಷ್ಟು ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲಿ ಯುನ್ ಅವರ ಹಾಟ್ ಫೋಟೋಗಳು ಕೂಡ ಇದೆ. ಅಮ್ಮ-ಮಗಳ ಜತೆಯಾದ ಫೋಟೋವನ್ನು ಯಾರಿಗಾದರೂ ತೋರಿಸಿದರೆ ಯಾರು ನಂಬುವುದಿಲ್ಲ. ತನ್ನ ಚರ್ಮ ರಕ್ಷಣೆಗೆ ಹೆಚ್ಚಾಗಿ ಮಾಶ್ಚರೈಸರ್ ಬಳುಸುವುದಾಗಿ ಹೇಳಿಕೊಂಡಿದ್ದಾರೆ. ಏನೇ ಆಗಲಿ 40ರ ಹರೆಯಲ್ಲೂ 20ರ ಯುವತಿಯಂತೆ ಕಾಣುವ ಯುನ್ ಸಾಕಷ್ಟು ಮಂದಿಗೆ ಪ್ರೇರಣೆಯು ಆಗಿದ್ದಾರೆ. (ಏಜೆನ್ಸೀಸ್)