ಸಿನಿವಾಣಿ

ಚಿತ್ರರಂಗಕ್ಕೆ ಹೊಸ ದಿಕ್ಕು; ಜ.28ಕ್ಕೆ ಯೋಗಿ ಸಿನಿಮಾ..

ಬೆಂಗಳೂರು: ಸರ್ಕಾರವು ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ತೆರವುಗೊಳಿಸುತ್ತಿದ್ದಂತೆಯೇ ‘ಒಂಬತ್ತನೇ ದಿಕ್ಕು’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ದಯಾಳ್ ಹೇಳಿದ್ದರು. ಈಗ ಅವೆರಡೂ ರದ್ದಾಗಿರುವುದರಿಂದ, ಯೋಗಿ ಅಭಿನಯದ ‘ಒಂಬತ್ತನೇ ದಿಕ್ಕು’ ಜ.28ಕ್ಕೆ ಬಿಡುಗಡೆ ಆಗುತ್ತಿದೆ. ಹಾಗೆ ನೋಡಿದರೆ, ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಬೇಕು ಎನ್ನುವುದಕ್ಕಿಂತ, ಮೊದಲು ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂಗಳನ್ನು ತೆರವುಗೊಳಿಸಬೇಕು ಎಂದು ಚಿತ್ರರಂಗದ ಹಲವರು ಕಾಯುತ್ತಿದ್ದರು.

ಏಕೆಂದರೆ, ಶನಿವಾರ ಮತ್ತು ಭಾನುವಾರ ಚಿತ್ರರಂಗಕ್ಕೆ ಬಹಳ ಮುಖ್ಯವಾದ ದಿನಗಳು. ಬೇರೆ ದಿನಗಳಿಗಿಂತ ಆ ಎರಡು ದಿನಗಳ ಕಾಲ ಕಲೆಕ್ಷನ್ ಹೆಚ್ಚಿರುತ್ತದೆ. ಇನ್ನು, ಬೇರೆ ಪ್ರದರ್ಶನಗಳಿಗೆ ಹೋಲಿಸಿದರೆ, ರಾತ್ರಿ ಪ್ರದರ್ಶನಕ್ಕೆ ಸ್ವಲ್ಪ ಜನ ಸೇರುತ್ತಾರೆ. ಆದರೆ, ನೈಟ್ ಕರ್ಫ್ಯೂದಿಂದ ರಾತ್ರಿ ಪ್ರದರ್ಶನವೇ ರದ್ದಾಗಿತ್ತು. ಇಷ್ಟೆಲ್ಲದರ ಮಧ್ಯೆ, ಚಿತ್ರ ಬಿಡುಗಡೆ ಮಾಡಿಯೂ ಏನೂ ಪ್ರಯೋಜನವಿಲ್ಲ ಎಂದು ಬಹಳಷ್ಟು ಚಿತ್ರತಂಡದವರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಈಗ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ರದ್ದಾಗುತ್ತಿದ್ದಂತೆಯೇ, ಚಿತ್ರರಂಗ ನಿಟ್ಟುಸಿರುಬಿಟ್ಟಿದೆ. ಅದರಲ್ಲೂ ಹೊಸಬರು ಖುಷಿಪಡುತ್ತಿದ್ದಾರೆ.

ಏಕೆಂದರೆ, ಹೊಸಬರ ಚಿತ್ರಗಳಿಗೆ ಹೇಗೂ ದೊಡ್ಡ ಸಂಖ್ಯೆಯಲ್ಲಿ ಜನ ಬರುವುದಿಲ್ಲ. ಶೇ. 50ರಷ್ಟು ಹಾಜರಾತಿಯೂ ಸಾಕಾಗಿರುವುದರಿಂದ, ಹಲವು ಹೊಸಬರ ಚಿತ್ರಗಳು ಮುಂದಿನ ದಿನಗಳಲ್ಲಿ ಬಿಡುಗಡೆ ಆಗುವುದಕ್ಕೆ ಸಜ್ಜಾಗಿವೆ. ಮುಂದಿನ ಶುಕ್ರವಾರದಿಂದಲೇ ಅಂದರೆ ಜ.28ರಿಂದಲೇ ಚಿತ್ರ ಬಿಡುಗಡೆ ಪ್ರಾರಂಭವಾಗಲಿದ್ದು, ದೊಡ್ಡ ಚಿತ್ರಗಳ ಪೈಪೋಟಿ ಬೇಡ ಎಂದು ಕಾಯುತ್ತಿರುವ ಹಲವು ಸಣ್ಣ ಚಿತ್ರಗಳು ಮುಂದಿನ ದಿನಗಳಲ್ಲಿ ಒಂದರಹಿಂದೊಂದು ಬಿಡುಗಡೆಯಾಗಲಿವೆ.