ಸಿನಿವಾಣಿ

ತಾರಾಯೋಗ :ಸಿನಿಮಾ ನಟಿಯರ ಆರೋಗ್ಯಯುತ ಬದುಕಿನ ಮನದಾಳ

ಶಿವಮಲ್ಲಯ್ಯ ಸ್ಥಾವರಮಠ

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಸಹಕಾರಿ. ಇನ್ನು ಸಿನಿ ತಾರೆಯರು ಶೂಟಿಂಗ್ ಒತ್ತಡದ ಮಧ್ಯೆ ದಿನವಿಡೀ ಚೈತನ್ಯದಿಂದ ಇರಲು ಯೋಗದ ಮೊರೆ ಹೋಗುತ್ತಾರೆ. ಹಾಗಾಗಿ, ಯೋಗ ಅವರ ಬದುಕಿನ ಭಾಗವಾಗಿದೆ. ಇಂದು ವಿಶ್ವ ಯೋಗ ದಿನ. ಈ ಹಿನ್ನೆಲೆಯಲ್ಲಿ ಚಂದನವನದ ನಟಿಯರಾದ ತೇಜು ಬೆಳವಾಡಿ, ಅಕ್ಷಿತಾ ಬೋಪಯ್ಯ ಮತ್ತು ನಿವಿಷ್ಕಾ ಪಾಟೀಲ್ ಯೋಗ ಜೀವನದ ಬಗ್ಗೆ ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.

ತಂದೆಯಿಂದ ಕಲಿತೆ

ನನಗೆ ಯೋಗ ಪರಿಚಯವಾಗಿದ್ದು ಅಪ್ಪನಿಂದ. ಚಿಕ್ಕವರಿರುವಾಗ ಅವರು ಪ್ರತಿನಿತ್ಯ ತಪ್ಪದೇ ಯೋಗಾಭ್ಯಾಸ ಮಾಡುತ್ತಿದ್ದರು. ಅವರಿಂದ ಸ್ಫೂರ್ತಿಗೊಂಡು ಯೋಗ ಕಲಿತು, ನಾನು ಅಭ್ಯಾಸ ಆರಂಭಿಸಿದೆ. ಇದರಿಂದ ನನ್ನೊಳಗೆ ಹೊಸ ಬದಲಾವಣೆ ಕಂಡುಕೊಂಡೆ. ಇತ್ತೀಚಿನ ದಿನಗಳಲ್ಲಿ ಯೋಗ ಎಂದರೆ ಕೇವಲ ಪ್ರದರ್ಶನ ಎಂಬಂತೆ ಆಗಿದೆ. ಅದು ತಪ್ಪು, ಯೋಗಾಭ್ಯಾಸದಿಂದ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ನಮ್ಮಲ್ಲಿ ಹೊಸ ಬದಲಾವಣೆ ಕಾಣುತ್ತೇವೆ. ವ್ಯಾಯಾಮ ಮಾಡಿದ ಬಳಿಕ ವಿಶ್ರಾಂತಿ ತೆಗೆದುಕೊಳ್ಳುತ್ತೇವೆ. ಆದರೆ, ಯೋಗ ಮಾಡಿದರೆ ಸಾಕು ನಮಗೆ ಯಾವ ವಿಶ್ರಾಂತಿಯೂ ಬೇಕಾಗಿಲ್ಲ. ಮನಸ್ಸು ಹಾಗೂ ದೇಹ ಪ್ರುಲ್ಲವಾಗಿರುತ್ತದೆ. ದಿನಕ್ಕೆ ಅರ್ಧ ಗಂಟೆಯಾದರೂ ಯೋಗಾಭ್ಯಾಸ ಮಾಡುತ್ತೇನೆ. ಇದರಿಂದ ಒತ್ತಡ ನಿರ್ವಹಣೆ ಮಾಡುವುದನ್ನು ಕಲಿತಿದ್ದೇನೆ.

ಅರ್ಚನಾ ಜೋಯಿಸ್, ನಟಿ

ಶಿಸ್ತು ಕಲಿಸಿಕೊಟ್ಟಿದೆ

2008ರಿಂದ ನಾನು ಪ್ರತಿದಿನ ತಪ್ಪದೆ ಯೋಗಾಭ್ಯಾಸ ಮಾಡುತ್ತಿದ್ದೇನೆ. ಇದೊಂದು ರೀತಿಯಲ್ಲಿ ನನಗೆ ವ್ರತವಾಗಿದೆ. ಕಾಲೇಜು ಹಾಗೂ ನೀನಾಸಂ ದಿನಗಳಲ್ಲಿ ಕೂಡ ನನಗೆ ಒಳ್ಳೆಯ ಯೋಗ ಗುರುಗಳು ಸಿಕ್ಕರು. ಹೀಗಾಗಿ, ಈ ಕಲಿಕೆಯ ಉತ್ಸಾಹ ಹಾಗೆಯೇ ಮುಂದುವರಿಯಿತು. ಯೋಗದಿಂದ ಜೀವನದಲ್ಲಿ ಶಿಸ್ತು ಕಲಿತಿದ್ದೇನೆ. ಎಲ್ಲೇ ಇರಲಿ, ಶೂಟಿಂಗ್, ಪ್ರವಾಸ ಅಥವಾ ಕುಟುಂಬದ ಯಾವುದೇ ಕಾರ್ಯಕ್ರಮವಿದ್ದರೂ, ಬೆಳಗ್ಗೆ ಮೊದಲು ಯೋಗ ಮಾಡುತ್ತೇನೆ. ಇದೀಗ ಯೋಗ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಾಕಷ್ಟು ವಿದ್ಯಾರ್ಥಿಗಳಿಗೆ ಯೋಗ ಕಲಿಸಿಕೊಡುತ್ತಿರುವ ಖುಷಿಯಿದೆ. ಸಾಮಾನ್ಯವಾಗಿ ನಮ್ಮ ವೃತ್ತಿಯಲ್ಲಿ ಬೇಜಾರು, ಖಿನ್ನತೆ ಸಾಮಾನ್ಯ. ಇದರಿಂದ ಹೊರಬರಲು ಯೋಗ ಸಹಕಾರಿಯಾಗಿದೆ. ಎಲ್ಲವನ್ನೂ ಬ್ಯಾಲೆನ್ಸ್ ಮಾಡಿ, ನನ್ನನ್ನು ಹೊಸತನಕ್ಕೆ ಕರೆದುಕೊಂಡು ಹೋಗುತ್ತದೆ. ಆ ದಿನವನ್ನು ಖುಷಿಯಾಗಿಡುತ್ತದೆ. ಜಠರ ಹಾಗೂ ಹೊಟ್ಟೆಯನ್ನು ಟ್ವಿಸ್ಟ್ ಮಾಡುವಂತಹ ಆಸನ ನನ್ನ ೇವರಿಟ್. ನಾವು ಚೈತನ್ಯಯುತವಾಗಿರಬೇಕಾದರೆ ದಿನಕ್ಕೆ 15 ನಿಮಿಷವಾದರೂ ಯೋಗ ಮಾಡಬೇಕು.

ತೇಜು ಬೆಳವಾಡಿ, ನಟಿ

ಸಿಟ್ಟು ನಿಯಂತ್ರಿಸಿದ್ದೆ ಯೋಗ

ನನಗೆ ಮೊದ ಮೊದಲು ತುಂಬಾ ಸಿಟ್ಟು ಬರುತ್ತಿತ್ತು. ಸಣ್ಣ ಸಣ್ಣ ವಿಚಾರಕ್ಕೂ ಸಿಟ್ಟಾಗುತ್ತಿದ್ದೆ. ಇದು ಹಲವರ ಬೇಸರಕ್ಕೆ ಕಾರಣವಾಗುತ್ತಿತ್ತು. ಈ ಸಿಟ್ಟು ನಿಯಂತ್ರಿಸುವುದಾದರೂ ಹೇಗೆ ಎಂಬ ಚಿಂತೆಯಲ್ಲಿದ್ದಾಗ ಸ್ನೇಹಿತೆಯೊಬ್ಬರು ಪ್ರತಿ ದಿನ ಯೋಗ ಮಾಡಲು ಸಲಹೆ ನೀಡಿದರು. ಅದರಂತೆ, ನಾನು ಯೋಗ ಕ್ಲಾಸ್ ಸೇರಿಕೊಂಡು, ಪ್ರತಿದಿನ ಯೋಗಾಭ್ಯಾಸ ಮಾಡತೊಡಗಿದೆ. ಆಗ, ಕೋಪ ನಿಯಂತ್ರಣಕ್ಕೆ ಬಂತು. ನನಗೆ ಎಷ್ಟೇ ಬೇಸರವಾದರೂ, ಮೊದಲಿನಂತೆ ಸಿಟ್ಟಾಗುವುದಿಲ್ಲ. ತುಂಬಾ ತಾಳ್ಮೆಯಿಂದ ಸೂಕ್ಷ್ಮವಾಗಿ ಆ ಸಂದರ್ಭವನ್ನು ನಿಭಾಯಿಸುತ್ತೇನೆ. ಈ ಗುಣ ನನ್ನಲ್ಲಿ ಬರಲು ಯೋಗವೇ ಕಾರಣ. ಸತತ ಮೂರು ವರ್ಷಗಳಿಂದ ಯೋಗ ಮಾಡುತ್ತಿದ್ದೇನೆ. ನನ್ನಲ್ಲಿ ಹಲವು ರೀತಿಯ ಬದಲಾವಣೆ ಜತೆಗೆ ನೆಮ್ಮದಿಯ ಜೀವನ ಕಂಡುಕೊಂಡಿದ್ದೇನೆ. ಪ್ರತಿದಿನ ಧ್ಯಾನ ಮತ್ತು ಸೂರ್ಯ ನಮಸ್ಕಾರ ಮಾಡುತ್ತೇನೆ. ಇದರಿಂದ ನಾನು ಉಲ್ಲಾಸಮಯವಾಗಿರಲು ಸಾಧ್ಯವಾಗಿದೆ. ಇಂದಿನ ಯುವಪೀಳಿಗೆ ಜಿಮ್ ಎಂಬ ಶೋಕಿ ಜೀವನದಿಂದ ಹೊರಬಂದು, ಯೋಗದತ್ತ ಮುಖಮಾಡಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸುಖವಾಗಿರಲು ಸಾಧ್ಯ.

ಅಕ್ಷಿತಾ ಬೋಪಯ್ಯ, ನಟಿ

ಆರೋಗ್ಯಕ್ಕೆ ಮೊದಲ ಆದ್ಯತೆ

ಚಿಕ್ಕಂದಿನಿಂದಲೂ ನಾನು ಯೋಗ ಮಾಡುತ್ತಿದ್ದೇನೆ. ಜಿಮ್ ಮತ್ತು ಡಯಟ್‌ಗಿಂತ ನನ್ನ ಮೊದಲ ಆದ್ಯತೆ ಯೋಗಕ್ಕೆ. ಇದರಿಂದಾಗಿ ದೇಹದ ಕೆಲ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದೇನೆ. ಕೆಲ ವರ್ಷಗಳ ಹಿಂದೆ ನನಗೆ ಅಜೀರ್ಣ ಹಾಗೂ ಬೆನ್ನು ನೋವು ಸಮಸ್ಯೆ ಇತ್ತು. ಯಾವಾಗ ಯೋಗಾಭ್ಯಾಸ ಆರಂಭ ಮಾಡಿದೆನೂ, ಆಗ ಆ ಸಮಸ್ಯೆ ಪರಿಹಾರವಾಯಿತು. ಇನ್ನು ಶೂಟಿಂಗ್ ಸಮಯ ಎಂದರೆ, ಸರಿಯಾದ ಸಮಯಕ್ಕೆ ನಿದ್ದೆ, ಊಟ ಆಗುವುದಿಲ್ಲ. ಅದರಿಂದಲೂ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಆದರೆ, ಯೋಗ ಮಾಡುವುದರಿಂದ ನನಗೆ ಯಾವ ಸಮಸ್ಯೆಯೂ ಇಲ್ಲ. ತುಂಬಾ ಆ್ಯಕ್ಟಿವ್ ಆಗಿರುತ್ತೇನೆ. ಮನಸ್ಸಿನ ಭಾರ ಇಳಿದು, ಹಗುರವಾಗಿರುವಂತಹ ಫೀಲ್ ಕೊಡುತ್ತದೆ. ಪ್ರತಿದಿನ 30ರಿಂದ 50 ಸೂರ್ಯ ನಮಸ್ಕಾರ ಮಾಡುತ್ತೇನೆ. ಕೆಲ ಕಾಲ ಧ್ಯಾನ ಮಾಡುತ್ತೇನೆ. ಮೊದ ಮೊದಲು ನಾನು ಯೋಗ ಕ್ಯಾಂಪ್‌ಗೆ ಹೋಗುತ್ತಿದ್ದೆ. ಈಗ ಬಿಜಿಯಾಗಿರುವ ಕಾರಣ ಆಗುತ್ತಿಲ್ಲವಷ್ಟೇ. ನಾವು ಚೈತನ್ಯಮಯವಾಗಿರಬೇಕು ಎಂದರೆ ಯೋಗದಿಂದ ಮಾತ್ರ ಸಾಧ್ಯ.

ನಿವಿಷ್ಕಾ ಪಾಟೀಲ್, ನಟಿ