ಸಿನಿವಾಣಿ

ಅವಧೂತ ಅರ್ಜುನ್​ ಗುರೂಜಿ ಭೇಟಿಯಾದ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರತಂಡ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕಾಶೀನಾಥ್​ ಪುತ್ರ ಅಭಿಮನ್ಯು ಕಾಶೀನಾಥ್​ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ರೀ-ಎಂಟ್ರಿ ಕೊಟ್ಟಿರುವುದು ಗೊತ್ತಿದೆ. ಕಿರಣ್​ ಸೂರ್ಯ ಆ್ಯಕ್ಷನ್​-ಕಟ್​ ಹೇಳಿರುವ ಈ ಚಿತ್ರ ಕಳೆದ ಶುಕ್ರವಾರ ರಿಲೀಸ್​ ಆಗಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ಮೈಸೂರಿನ ಅವಧೂತ ಅರ್ಜುನ್​ ಗುರೂಜಿ ಭೇಟಿಯಾಗಿ, ಆಶೀರ್ವಾದ ಪಡೆದಿದ್ದಾರೆ.

ನಾಯಕ ಅಭಿಮನ್ಯು ಕಾಶೀನಾಥ್​, ನಿರ್ದೇಶಕ ಕಿರಣ್​ ಸೂರ್ಯ, ನಾಯಕಿಯರಾದ ಸ್ಫೂರ್ತಿ ಉಡಿಮನೆ, ವಿಜಯಶ್ರೀ ಕಲಬುರ್ಗಿ ಸೇರಿ ಇತರರು ಅವಧೂತ ಅರ್ಜುನ್​ ಗುರೂಜಿಯನ್ನು ಭೇಟಿಯಾಗಿದ್ದಾರೆ. ಅಭಿಮನ್ಯು ಕಾಶೀನಾಥ್, ತಂದೆ ಕಾಶೀನಾಥ್ ಅವರ ಹೆಸರು ಅಜರಾಮರವಾಗಲೆಂದು ಬೇಡಿಕೊಂಡಿದ್ದಾರೆ. ನಂತರ ಆಶೀರ್ವಚನ ನೀಡಿದ ಅವಧೂತ ಅರ್ಜುನ್ ಗುರೂಜಿ ಈ ಸಿನಿಮಾ ಸಂಪೂರ್ಣವಾಗಿ ಯಶಸ್ಸು ಗಳಿಸಲೆಂದು ಹಾರೈಸುತ್ತಲೇ, ಅಭಿಮನ್ಯು ತಮ್ಮ ಸಿನಿಮಾಗಳ ಮೂಲಕ ಯುವ ಜನತೆಗೆ ಉತ್ತಮ ಸಂದೇಶಗಳನ್ನು ನೀಡಲಿ ಎಂದು ಹರಸಿದ್ದಾರೆ.

ಅಭಿಮನ್ಯು ಕಾಶಿನಾಥ್, ಸ್ಫೂರ್ತಿ ಉಡಿಮನೆ, ವಿಜಯಶ್ರೀ ಕಲಬುರ್ಗಿ ಜತೆ ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ.