ಸಿನಿವಾಣಿ

ಆರಂಭದಲ್ಲೇ ಯಶ; ಮೊದಲ ಚಿತ್ರ ಬಿಡುಗಡೆಗೆ ಮುನ್ನವೇ ಮೂರನೇ ಚಿತ್ರದಲ್ಲಿ ನಟನೆ

ಬೆಂಗಳೂರು: ಕೆಲವರು ಅದೆಷ್ಟೇ ಪ್ರಯತ್ನಪಟ್ಟರೂ ಅವಕಾಶಗಳು ಸಿಗುವುದಿಲ್ಲ. ಇನ್ನು ಕೆಲವರು ಅವಕಾಶಗಳು ತನ್ನಿಂತಾನೇ ಹುಡುಕಿಕೊಂಡು ಬರುತ್ತವೆ. ಯಶಾ ಶಿವಕುಮಾರ್ ಅವರನ್ನೇ ತೆಗೆದುಕೊಳ್ಳಿ. ಯೋಗರಾಜ್ ಭಟ್ ನಿರ್ವಣದ ‘ಪದವಿಪೂರ್ವ’ ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದರು ಅವರು. ಕೆಲವೇ ದಿನಗಳಲ್ಲಿ, ಶಿವರಾಜಕುಮಾರ್ ಅಭಿನಯದ ‘ಶಿವಪ್ಪ’ದಲ್ಲಿ ಒಂದು ಪಾತ್ರ ಗಿಟ್ಟಿಸಿಕೊಂಡರು. ಇದೀಗ ‘ರಾಜ್ ಸೌಂಡ್ ಆಂಡ್ ಲೈಟ್ಸ್’ ಎಂಬ ಕನ್ನಡ-ತುಳು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ರಾಜ್ ಬಿ ಶೆಟ್ಟಿ ಮಾರ್ಗದರ್ಶನದಲ್ಲಿ ಪ್ರಾರಂಭವಾಗಿರುವ ಚಿತ್ರ ಈ ‘ರಾಜ್ ಸೌಂಡ್ ಆಂಡ್ ಲೈಟ್ಸ್’. ಈ ಹಿಂದೆ ‘ಒಂದು ಮೊಟ್ಟೆಯ ಕಥೆ’ ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಈ ಚಿತ್ರದಲ್ಲೂ ಕೆಲಸ ಮಾಡುತ್ತಿದೆ. ಅದರಲ್ಲಿ ರಾಜ್ ಸಹೋದರನಾಗಿ ನಟಿಸಿದ್ದ ವಿನೀತ್ ಕುಮಾರ್, ಇಲ್ಲಿ ನಾಯಕನಾಗಿ ಬಡ್ತಿ ಪಡೆದಿದ್ದು, ಅವರಿಗೆ ನಾಯಕಿಯಾಗಿ ಯಶಾ ಆಯ್ಕೆಯಾಗಿದ್ದಾರೆ. ಇದೊಂದು ಮದುವೆಯ ಕಥೆಯಾಗಿದ್ದು, ಹಿಂದಿಯ ‘ಬ್ಯಾಂಡ್ ಬಾಜಾ ಬಾರಾತ್’ ಮತ್ತು ‘ದಿಲ್​ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಾಲಿಗೆ ಸೇರುತ್ತದಂತೆ. ಅಷ್ಟೇ ಅಲ್ಲ, ಇಡೀ ಕಥೆ ಮದುವೆಯೊಂದರ ಸುತ್ತ ಸುತ್ತದಂತೆ. ಮದುವೆಯೊಂದಕ್ಕೆ ಸೌಂಡ್ ಸಿಸ್ಟಂ ಬಾಡಿಗೆಗೆ ಕೊಡುವುದಕ್ಕೆ ಬಂದವನೊಬ್ಬ, ತಾನೇ ಕೊನೆಯಲ್ಲಿ ಮದುವೆಯಾಗುವ ಕಥೆ ಈ ಚಿತ್ರದಲ್ಲಿದೆ. ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಎರಡೂ ಭಾಷೆಗಳಿಗೆ ಸಲ್ಲುವ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.