- ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ರಿಲೀಸ್ ಡೇಟ್ ಫಿಕ್ಸ್
- ಇದೇ ಆಗಸ್ಟ್ ತಿಂಗಳಲ್ಲಿ ಚಿತ್ರ ತೆರೆ ಕಾಣಲು ಸಿದ್ಧ
ಬೆಂಗಳೂರು: ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್, ನಟ ಯಶ್ ಅಭಿನಯದ ಹಾಗೂ ಮಾಲಿವುಡ್ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' (Toxic) ಚಿತ್ರದ ಹವಾ ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಬಲು ಜೋರಾಗಿದೆ. ಈಗಾಗಲೇ ಹಲವು ಬಾರಿ ರಿಲೀಸ್ ಡೇಟ್ನಲ್ಲಿ ಮುಂದೂಡಿಕೆಯಾಗಿದ್ದ ಚಿತ್ರಕ್ಕೆ ಕಡೆಗೂ ಅಧಿಕೃತ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.
ಆರಂಭದಲ್ಲಿ ಸಿನಿಮಾದ ಮೊದಲು ಮತ್ತು ಎರಡನೇ ಟೀಸರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುವುದರ ಜತೆಗೆ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತು. ಜಾಗತಿಕ ಮಟ್ಟದಲ್ಲಿ ಚಿತ್ರ ತೆರೆ ಕಾಣುತ್ತಿರುವ ಹಿನ್ನೆಲೆ ಸಿನಿಮಾದ ರಿಲೀಸ್ ಡೇಟ್ ಪದೇ ಪದೇ ಮುಂದೂಡಿಕೆಯಾಯಿತು. ಆದರೀಗ, ಯಶ್ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಫೈನಲ್ ಆಗಿದ್ದು, ಇದೇ ಆಗಸ್ಟ್ 26ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ.
ಈ ವರ್ಷದ ಮಾರ್ಚ್ 19ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದ್ದ ಟಾಕ್ಸಿಕ್, ಕನ್ನಡ, ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲು ಮುಂದಾಗಿತ್ತು. ಮತ್ತೊಂದೆಡೆ, ಇದೇ ದಿನದಂದು ರಣವೀರ್ ಸಿಂಗ್ ಅಭಿನಯದ ಬ್ಲಾಕ್ಬಸ್ಟರ್ 'ಧುರಂಧರ್' ಸಿನಿಮಾ ಸೀಕ್ವೆಲ್ ಕೂಡ ಬಿಡುಗಡೆಯಾಗಲು ಸಜ್ಜಾಗಿತ್ತು. ಆದರೆ, ಮುಂದೂಡಿಕೆಯಿಂದ, ಜಾಗತಿಕ ಹಾಗೂ ದೇಶಿಯ ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿತು.
ಅತ್ಯಧಿಕ ರನ್ಟೈಮ್
'ಗುಲ್ಟೇ' ಸಿನಿ ವರದಿ ಪ್ರಕಾರ, ಯಶ್ ಅವರ ಟಾಕ್ಸಿಕ್ ಚಿತ್ರದ ರನ್ಟೈಮ್ ಬರೋಬ್ಬರಿ 3 ಗಂಟೆ 15 ನಿಮಿಷವಿದೆ. ಅಮೆರಿಕನ್ ಶೋಗಳನ್ನು ಗಮನದಲ್ಲಿಟ್ಟುಕೊಂಡು ಇಷ್ಟು ಗಂಟೆಗಳ ಕಾಲ ಸಿನಿಮಾವನ್ನು ತಯಾರಿಸಲಾಗಿದೆ. 'ಧುರಂಧರ್ 2: ದಿ ರಿವೆಂಜ್' ಚಿತ್ರವು 3 ಗಂಟೆ 50 ನಿಮಿಷಗಳ ಲೆಂಥಿ ರನ್ಟೈಮ್ ಹೊಂದಿತ್ತು. ಈ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಬಳಿಕ ಈಗ ಯಶ್ ಚಿತ್ರವನ್ನು ಸಿನಿಪ್ರೇಮಿಗಳು ಮೂರು ಗಂಟೆಗೂ ಹೆಚ್ಚು ಸಮಯ ಕುಳಿತು ನೋಡಬೇಕಿದೆ ಎಂದು ವರದಿಗಳು ಉಲ್ಲೇಖಿಸಿವೆ.
'ಟಾಕ್ಸಿಕ್' ವಿವಾದ
'ಕೆಜಿಎಫ್' ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ನಟ ರಾಕಿಂಗ್ ಸ್ಟಾರ್ ಯಶ್ 40ನೇ ವಸಂತಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಮೊದಲ ಟೀಸರ್ ರಿಲೀಸ್ ಆಯಿತು. ಟೀಸರ್ನ ಆರಂಭದಲ್ಲಿ ಮೂಡಿಬಂದ ಹಸಿಬಿಸಿ ದೃಶ್ಯವಂತು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ, ಹಲವು ಕಾನೂನು ದೂರುಗಳಿಗೂ ಕಾರಣವಾಯಿತು. ಸಿನಿಮಾದ ನಿರ್ದೇಶಕಿ ವಿರುದ್ಧ ತೀವ್ರ ಟೀಕೆಗಳು ಹರಿದುಬಂದಿತು. ಈಗ ಎರಡನೇ ಟೀಸರ್ ಯಶ್ ಪಾತ್ರದ ಮೇಲೆ ಭಾರೀ ಕುತೂಹಲವನ್ನು ಕೆರಳಿಸಿದೆ. ಕಾರಣ, ಇದರಲ್ಲಿ ತೋರಿಸಲಾದ ಸ್ಟಾರ್ ನಟನ ದ್ವಿಪಾತ್ರ.