ಸಿನಿವಾಣಿ

ವಿಶಾಲ್​ ಚಿತ್ರದ ಟ್ರೇಲರ್​ ಬಿಡುಗಡೆ ಮಾಡ್ತಿರೋ ಕನ್ನಡದ ಸ್ಟಾರ್​ ನಟ ಯಾರು?

ಕಳೆದ ವರ್ಷ ಬಿಡುಡೆಯಾದ ಆಕ್ಷನ್​ ಚಿತ್ರದ ನಂತರ ತಮಿಳಿನ ವಿಶಾಲ್​ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈಗ ವಿಶಾಲ್​ ಸದ್ದಿಲ್ಲದೆ ಚಕ್ರ ಎಂಬ ಚಿತ್ರದಲ್ಲಿ ಆಕ್ಟ್​ ಮಾಡಿದ್ದಾರೆ. ಬಹುಶಃ ಲಾಕ್​ಡೌನ್​ ಇಲ್ಲದಿದ್ದರೆ ಚಿತ್ರ ಇಷ್ಟು ಹೊತ್ತಿಗೆ ಬಿಡುಗಡೆಯಾಗುತಿತ್ತೇನೋ? ಆದರೆ, ಚಿತ್ರಮಂದಿರಗಳ ಪ್ರದರ್ಶನ ರದ್ದಾಗಿರುವುದರಿಂದ, ವಿಶಾಲ್​​ ತಮ್ಮ ಚಿತ್ರದ ಬಿಡುಗಡೆಯನ್ನು ಪೋಸ್ಟ್​ಪೋನ್​ ಮಾಡಿದ್ದಾರೆ.

ಚಕ್ರ ಚಿತ್ರವನ್ನು ತಮಿಳಿನಲ್ಲಿ ಚಿತ್ರಿಸಿರುವ ವಿಶಾಲ್​, ಆ ಚಿತ್ರವನ್ನು ಇದೀಗ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದಾರೆ. ಅಷ್ಟೇ ಅಲ್ಲ, ನಾಲ್ಕೂ ಭಾಷೆಗಳ ಟ್ರೇಲರ್​ಗಳನ್ನು ಆಯಾ ಭಾಷೆಯ ಚಿತ್ರರಂಗದ ಸ್ಟಾರ್ ನಟರಿಂದ ಬಿಡುಗಡೆ ಮಾಡಿಸುವುದು ಅವರ ಯೋಚನೆ.

ಈ ಚಿತ್ರದ ಟ್ರೇಲರ್​ಗಳು ಇದೇ ಶನಿವಾರ (ಜೂನ್​ 27)ಕ್ಕೆ ಬಿಡುಗಡೆಯಾಗಲಿದೆ. ಈ ಪೈಕಿ ಕನ್ನಡದ ಟ್ರೇಲರ್​ ಬಿಡುಗಡೆ ಮಾಡುತ್ತಿರುವುದು ಯಾರು ಗೊತ್ತಾ? ರಾಕಿಂಗ್​ ಸ್ಟಾರ್ ಯಶ್​. ಈ ಹಿಂದೆ ಯಶ್​ ಅಭಿನಯದ ಕೆಜಿಎಫ್​ ಚಿತ್ರದ ತಮಿಳು ಅವತರಣಿಕೆಯನ್ನು ವಿಶಾಲ್​, ತಮಿಳುನಾಡಿನಲ್ಲಿ ಬಿಡುಗಡೆ ಮಾಡಿದ್ದರು. ಈಗ ವಿಶಾಲ್​ ಚಿತ್ರದ ಟ್ರೇಲರ್​ನ್ನು ಯಶ್​ ಬಿಡುಗಡೆ ಮಾಡಲಿದ್ದಾರೆ.

ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್​​ನ್ನು ಯಶ್​ ಬಿಡುಗಡೆ ಮಾಡಿದರೆ, ಕಾರ್ತಿ ಮತ್ತು ಆರ್ಯ ಜಂಟಿಯಾಗಿ ತಮಿಳನ ಟ್ರೇಲರ್​ ಬಿಡುಗಡೆ ಮಾಡಲಿದ್ದಾರೆ. ಇನ್ನು ಮೋಹನ್​ ಲಾಲ್​ ಮತ್ತು ರಾಣಾ ದಗ್ಗುಬಾಟಿ ಕ್ರಮವಾಗಿ ಮಲಯಾಳಂ ಮತ್ತು ತೆಲುಗು ಚಿತ್ರಗಳ ಟ್ರೇಲರ್​ ಬಿಡುಗಡೆ ಮಾಡಲಿದ್ದಾರೆ.

ಚಕ್ರ ಚಿತ್ರದಲ್ಲಿ ವಿಶಾಲ್​ಗೆ ನಾಯಕಿಯಾಗಿ ಕನ್ನಡತಿ ಶ್ರದ್ಧಾ ಶ್ರೀನಾಥ್​ ನಟಿಸಿದ್ದಾರೆ. ಅವರಿಲ್ಲಿ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ರೆಜಿನಾ ಕಸಾಂದ್ರ, ಸೃಷ್ಟಿ ದಂಗೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಎಂ.ಎಸ್​. ಆನಂದನ್​ ನಿರ್ಮಿಸಿದ್ದು, ವಿಶಾಲ್​ ಫಿಲ್ಮ್​ ಫ್ಯಾಕ್ಟರಿ ಬ್ಯಾನರ್​ನಡಿ ವಿಶಾಲ್​ ಈ ಸಿನಿಮಾ ನಿರ್ಮಿಸಿದ್ದಾರೆ.