ಬೆಂಗಳೂರು: ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯೂ ಒಂದು. 'ಮೊಗ್ಗಿನ ಮನಸ್ಸು', 'ಡ್ರಾಮಾ', 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ಮತ್ತು 'ಸಂತು ಸ್ಟ್ರೇಟ್ ಫಾರ್ವರ್ಡ್' ಎಂಬ ನಾಲ್ಕು ಚಿತ್ರಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಜತೆಯಾಗಿ ನಟಿಸಿದ್ದರೂ, ಈ ಜೋಡಿ ಇನ್ನಷ್ಟು ಚಿತ್ರಗಳಲ್ಲಿ ನಟಿಸಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.
ಇದನ್ನೂ ಓದಿ: ಸನ್ನಿ ಡಿಯೋಲ್ಗೆ ‘ವೈ’ ಕೆಟಗರಿ ಭದ್ರತೆ … ಯಾಕೆ ಹೇಳಿ?
ಈಗ್ಯಾಕೆ ಈ ಮಾತು ಎಂದರೆ, ಯಶ್ ಮತ್ತು ರಾಧಿಕಾ ಇಬ್ಬರೂ 'ಸಂತು ಸ್ಟ್ರೇಟ್ ಫಾರ್ವರ್ಡ್' ಚಿತ್ರದ ನಂತರ ಜೊತೆಯಾಗಿ ನಟಿಸಿರಲಿಲ್ಲ. ಮದುವೆಯಾದ ನಂತರ ಇಬ್ಬರೂ ಜತೆಯಾಗಿ ನಟಿಸಲಿ ಎಂದು ಅಭಿಮಾನಿಗಳ ಹಾರೈಕೆಯಾದರೂ, ಕಾರಣಾಂತರಗಳಿಂದ ಅವರಿಬ್ಬರೂ ತೆರೆ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಯಶ್ ಮತ್ತು ರಾಧಿಕಾ ಇಬ್ಬರೂ ಜತೆಯಾಗಿ ನಟಿಸಿದ್ದಾರೆ. ಈ ಬಾರಿ ಸಿನಿಮಾದಲ್ಲಲ್ಲ, ಒಂದು ಹೊಸ ಜಾಹೀರಾತಿನಲ್ಲಿ ಎಂಬುದು ಗೊತ್ತಿರಲಿ.
ಫ್ರೀಡಂ ಸನ್ಫ್ಲವರ್ ಆಯಿಲ್ನಲ್ಲಿ ಯಶ್ ಮತ್ತು ರಾಧಿಕಾ ಜತೆಯಾಗಿ ನಟಿಸಿದ್ದಾರೆ. ಫ್ರೀಡಂ ಸನ್ಫ್ಲವರ್ ಆಯಿಲ್ ಬಳಸಿ ರಾಧಿಕಾ ಮಾಡುವ ಅಡುಗೆಯನ್ನು ಸವಿದು 'ಐ ಫೀಲ್ ಗ್ರೇಟ್' ಎಂದು ಯಶ್ ಹೇಳುವುದು ಈ ಜಾಹೀರಾತಿನ ಸಾರ. ಸದ್ಯದಲ್ಲೇ ಈ ಜಾಹೀರಾತು ಪ್ರಸಾರವಾಗಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಯಶ್, ತಾವು ಹಾಗೂ ರಾಧಿಕಾ ಫ್ರೀಡಂ ಸನ್ಫ್ಲವರ್ ಆಯಿಲ್ನತ್ತ ಶಿಫ್ಟ್ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಡಯಟ್ನ ಒಂದು ಭಾಗವೇ ಆಗಿಬಿಟ್ಟಿದೆ ಎಂದು ಹೇಳಿದ್ದಾರೆ.