ಸಿನಿವಾಣಿ

ಯಾರ್ ಮಗನಿಗೆ ಮುಹೂರ್ತ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ‘ಇದು ಸತ್ಯಕಥೆ ಆಧಾರಿತ ಸಿನಿಮಾ. ಚಿತ್ರದ ಕಥೆ 1995ರಿಂದ 2000ನೇ ಅವಧಿಯಲ್ಲಿ ಸಾಗುತ್ತದೆ. ರೌಡಿ ಆಗಲು ಹೊರಟ ಹುಡುಗನೊಬ್ಬನ ಬದುಕಲ್ಲಿ ನೈಜ ರೌಡಿಗಳೇ ಹೇಗೆಲ್ಲ ಬದಲಾವಣೆಗೆ ಕಾರಣರಾಗುತ್ತಾರೆ ಎನ್ನುವುದೇ ಚಿತ್ರದ ಒನ್​ಲೈನ್ ಸ್ಟೋರಿ’ ಎನ್ನುತ್ತ ಸಿನಿಮಾ ಬಗ್ಗೆ ಹೇಳಿದರು ನಿರ್ದೇಶಕ ಸುರೇಶ್ ರಾಜು.

ಅವರು ಹೇಳಲು ಹೊರಟಿದ್ದು ತಮ್ಮ ನಿರ್ದೇಶನದ ‘ಯಾರ್ ಮಗ’ ಸಿನಿಮಾದ ಕುರಿತು. ಹೀಗೊಂದು ಶೀರ್ಷಿಕೆಯ ಸಿನಿಮಾದ ಹೀರೋ ಯಾರು ಎಂದರೆ ಅವರು ‘ಯಾರ್ ಮಗ’ ಎಂದೇ ಹೇಳಬೇಕಾಗುತ್ತದೆ. ಕರವೇ ಮುಖಂಡ ಬಸವರಾಜ ಪಡುಕೋಟೆ ತಮ್ಮ ಪುತ್ರ ರಘು ಪಡುಕೋಟೆ ಅವರನ್ನು ಹೀರೋ ಆಗಿಸುತ್ತಿದ್ದಾರೆ. ಪುತ್ರನಿಗಾಗಿ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಅವರು ನಿರ್ವಪಕರೂ ಆಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರಕ್ಕೆ ಮುಹೂರ್ತ ಮುಗಿದಿದ್ದು, ಆ ಸಂದರ್ಭದಲ್ಲಿ ಚಿತ್ರತಂಡ ತಮ್ಮ ಹೊಸ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತು. ‘ನನಗೆ ಚಿತ್ರರಂಗ ಹೊಸದಲ್ಲ. ನಾನು ರಾಜ್​ಕುಮಾರ್ ಅಭಿಮಾನಿ. ಗಾಂಧಿನಗರದಲ್ಲಿ ಅವರ ಕಟೌಟ್ ಕಟ್ಟಿಕೊಂಡು ಬದುಕುತ್ತಿದ್ದವನು. ಆದ್ದರಿಂದ ಸಿನಿಮಾ ಸೆಳೆತ ಉಂಟಾಗಿ ಈಗ ಚಿತ್ರ ನಿರ್ವಣಕ್ಕೆ ಬಂದಿದ್ದೇನೆ. ಪುತ್ರನನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ’ ಎಂದರು ನಿರ್ವಪಕ ಬಸವರಾಜ್ ಪಡುಕೋಟೆ.

ಮುಂಬೈ, ಮಂಗಳೂರು, ಬೆಂಗಳೂರು ಮತ್ತಿತರ ಕಡೆ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ. ವಿದ್ಯಾಪ್ರಭು ನಾಯಕಿಯಾಗಿ, ಜತೆಗೆ ಬಲರಾಜ್ ವಾಡಿ, ಗಣೇಶ್, ಕಾಕ್ರೋಚ್ ಸುಧೀರ್ ಮತ್ತಿತರು ಇದ್ದಾರೆ. ಬೆಂಗಳೂರಿನ ಶಿವಾಜಿನಗರದ ರಿಯಲ್ ರೌಡಿಗಳಾದ ತನ್ವೀರ್, ಇಷ್ತಿಯಾಕ್ ರೌಡಿಗಳಾಗಿಯೇ ಪರದೆ ಮೇಲೆ ಕಾಣಿಸಿಕೊಳ್ಳಲಿರುವುದು ಈ ಚಿತ್ರದ ವಿಶೇಷ.