ಬೆಂಗಳೂರು: ‘ನಾನು ಮೂಲತಃ ಭರತನಾಟ್ಯ ಕಲಾವಿದೆ. ಹಾಗೆಯೇ ಎಂ.ಎಸ್.ಸತ್ಯು ನಿರ್ದೇಶನದ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ರಾಷ್ಟ್ರಮಟ್ಟದಲ್ಲೂ ನಮ್ಮ ನಾಟಕಗಳು ಪ್ರದರ್ಶನವಾಗಿವೆ. ಹೀಗಿರುವಾಗ, ಒಮ್ಮೆ ಸತ್ಯು ಸರ್ ವೆಬ್‌ಸರಣಿಗಾಗಿ ನನ್ನ ಫೋಟೋಶೂಟ್ ಮಾಡಿಸಿದ್ದರು. ಆಕಸ್ಮಿಕವಾಗಿ ಆ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿ, ಅಪೂರ್ವ ಕಾಸರವಳ್ಳಿ ನೋಡಿದ್ದಾರೆ. ಅವರೇ ಕರೆದು ನನಗೆ ಅವರ ತಂದೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಚಿತ್ರಕ್ಕೆ ಅವಕಾಶ ನೀಡಿದರು. ಹೀಗೆ ನನ್ನ ಸಿನಿಮಾ ಜರ್ನಿ ಆರಂಭವಾಯಿತು. ಬಳಿಕ ‘ದೂರದರ್ಶನ’, ಇದೀಗ ‘ಎಕ್ಸ್ ಆ್ಯಂಡ್ ವೈ’. ಜತೆಗೆ ಕೈಯಲ್ಲಿ ಇನ್ನೂ ಮೂರು ಸಿನಿಮಾಗಳಿವೆ’. - ಒಂದೇ ದಾಟಿಯಲ್ಲಿ ತಮ್ಮ ಸಿನಿಜರ್ನಿಯ ಮಾಹಿತಿ ನೀಡುತ್ತಾರೆ ನಟಿ ಆಯನಾ.
ಮೂಲತಃ ಬೆಂಗಳೂರಿನವರಾದ ಅವರು, ಇದೀಗ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಡಿ.ಸತ್ಯ ಪ್ರಕಾಶ್ ನಿರ್ದೇಶನದ ಫ್ಯಾಂಟಸಿ, ಕಾಮಿಡಿ ಜಾನರ್‌ನ ‘ಎಕ್ಸ್ ಆ್ಯಂಡ್ ವೈ’ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮೂರನೇ ಸಿನಿಮಾದ ಬಗ್ಗೆ ಹೆಚ್ಚು ನಿರೀಕ್ಷೆಯಲ್ಲಿರುವ ಆಯನಾ, ‘‘ದೂರದರ್ಶನ’ದಲ್ಲಿ ನನ್ನ ಅಭಿನಯ ನೋಡಿದ್ದ ಸತ್ಯಪ್ರಕಾಶ್ ಸರ್ ಈ ಪಾತ್ರಕ್ಕೆ ಒಪ್ಪುತ್ತೇನೆ ಅಂತ ಅವಕಾಶ ನೀಡಿದರು. ನನ್ನ ಪಾತ್ರದ ಹೆಸರು ಆಶಾ. ಒಂದು ಆತ್ಮದ ಜತೆ ಪ್ರಯಾಣ ಮಾಡುವ ಪಾತ್ರ. ಬಬ್ಲಿ ಆ್ಯಂಡ್ ಕ್ಯೂಟ್ ಕ್ಯಾರೆಕ್ಟರ್ ಆಗಿದ್ದು, ಮಂಗಳೂರು ಹಾಗೂ ಸಮುದ್ರ ತೀರದಲ್ಲಿ ಮಳೆ ಹಾಗೂ ಬಿಸಿಲಿನ ನಡುವೆ ಶೂಟಿಂಗ್ ಮಾಡಿದ್ದು ವಿಶೇಷ ಅನುಭವ. ಕ್ರೋಮೋರೆನ್‌ಗಳ ಕುರಿತಂತೆ ಈವರೆಗೆ ಸಿನಿಮಾ ಬಂದಿಲ್ಲ ಎಂದು ಕಾಣಿಸುತ್ತದೆ. ಆ ಕ್ರೋಮೊರೆನ್‌ಗಳ ಬಗ್ಗೆ ಇರುವ ತಾಜಾತನದ ಕಥೆ ಇದು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.
ಕನ್ನಡದಲ್ಲಿ ಎರಡು, ತೆಲುಗಿನಲ್ಲೊಂದು: ಅಯಾನಾಗೆ ಈ ವರ್ಷ ಶುಭದಾಯಕವಾಗಿದೆ. ಅವರ ಮೂರು ಸಿನಿಮಾ ಹಾಗೂ ಒಂದು ವೆಬ್ ಸಿರೀಸ್ ಬಿಡುಗಡೆ ಹಂತದಲ್ಲಿವೆ. ಹಾಗೆಯೇ ತೆಲುಗಿಗೂ ಡೆಬ್ಯೂ ಆಗುತ್ತಿದ್ದಾರೆ. ‘ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿರುವ ಹೊಸ ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾಗುತ್ತಿದ್ದೇನೆ. ಈಗಾಗಲೇ ಶೂಟಿಂಗ್ ಪೂರ್ಣವಾಗಿದೆ. ನನಗೆ ತೆಲುಗು ಬಾರದ ಕಾರಣ 10 ದಿನ ವರ್ಕ್‌ಶಾಪ್ ಮಾಡಿದೆ. ಇದೀಗ ಅರ್ಥವಾಗುತ್ತದೆ, ಸ್ವಲ್ಪ ಮಾತನಾಡುತ್ತೇನೆ ಕೂಡ’ ಎಂದು ಖುಷಿಹಂಚಿಕೊಳ್ಳುವ ಆಯನಾ, ಸದ್ಯ ಕನ್ನಡದಲ್ಲಿ ವಿಜಯ ನಾಗೇಂದ್ರ ನಿರ್ದೇಶನದ ‘ಆಲ್ಫಾ’ದ ಶೂಟಿಂಗ್‌ನಲ್ಲಿ ಬಿಜಿಯಿದ್ದಾರೆ. ಜತೆಗೆ ಅವರು ನಟಿಸಿರುವ ವೆಬ್‌ಸಿರೀಸ್ ಸಹ ಸದ್ಯ ರಿಲೀಸ್‌ಗೆ ಸಿದ್ಧವಾಗಿದೆ.