ಸಿನಿವಾಣಿ

ರಣವೀರ್ ಕೈಯಲ್ಲಿ ವಿಶ್ವಕಪ್

kumarvrl

ರಣವೀರ್ ಸಿಂಗ್ ಅಭಿನಯದ ‘83’ ಚಿತ್ರದ ಟ್ರೇಲರ್ ಬಿಡುಗಡೆಯಾಗುವುದಕ್ಕೆ ದಿನಗಣನೆ ಪ್ರಾರಂಭವಾಗಿದೆ. ಟ್ರೇಲರ್ ಮಾರ್ಚ್ 11ರ ಬುಧವಾರದಂದು ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಚಿತ್ರದ ಒಂದು ಫೋಟೋ ಬಿಡುಗಡೆಯಾಗಿದೆ.

‘83’ ಚಿತ್ರದ ಬಗ್ಗೆ ಸಿನಿಮಾಸಕ್ತರಿಗೆ ಗೊತ್ತಿರಲೇಬೇಕು. ಈ ವರ್ಷದ ಅತೀ ನಿರೀಕ್ಷಿತ ಸ್ಪೋರ್ಟ್ಸ್ ಚಿತ್ರ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಈ ಚಿತ್ರವು, ಭಾರತ 1983ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದ ಕಥೆಯನ್ನು ಹೇಳುತ್ತದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಖ್ಯಾತ ಕ್ರಿಕೆಟಿಗ ಮತ್ತು ಆಗಿನ ಕ್ಯಾಪ್ಟನ್ ಆಗಿದ್ದ ಕಪಿಲ್ ದೇವ್ ಅವರ ಪಾತ್ರವನ್ನು ಮಾಡಿದ್ದಾರೆ. ಇಲ್ಲಿಯವರೆಗೂ ಚಿತ್ರದ ಫಸ್ಟ್ ಲುಕ್ ಮಾತ್ರ ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ರಣವೀರ್ ಸಿಂಗ್ ಅವರು ವಿಶ್ವಕಪ್ ಹಿಡಿದಿರುವ ಫೋಟೋವನ್ನು ಬಿಡುಗಡೆ ಮಾಡಿದೆ. ‘83’ ಚಿತ್ರವು ಏಪ್ರಿಲ್ 11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಇನ್ನು ಟ್ರೇಲರ್ ಬಿಡುಗಡೆ ಮಾರ್ಚ್ 11ರಂದು ನಡೆಯಲಿದ್ದು, ಈ ಸಮಾರಂಭವನ್ನು ದೊಡ್ಡಮಟ್ಟದಲ್ಲಿ ಮಾಡುವುದಕ್ಕೆ ಚಿತ್ರತಂಡ ತೀರ್ವನಿಸಿದೆ. ಮುಂಬೈನ ಎಂ.ಎಂ.ಆರ್.ಡಿ.ಎ ಗ್ರೌಂಡ್​ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸಮಾರಂಭದಲ್ಲಿ ಚಿತ್ರತಂಡವಷ್ಟೇ ಅಲ್ಲ, ಚಿತ್ರರಂಗದ ಸಾಕಷ್ಟು ಗಣ್ಯರು ಸಹ ಭಾಗವಹಿಸುವ ನಿರೀಕ್ಷೆ ಇದೆ. -ಏಜೆನ್ಸೀಸ್