ಸಿನಿವಾಣಿ

ಕರಣ್​, ಆದಿತ್ಯ ಚೋಪ್ರಾ ವಿಚಾರಣೆ ಮಾಡಿಲ್ಲ ಏಕೆ: ಮುಂಬೈ ಕಾಪ್​ಗೆ ಕಂಗನಾ ಪ್ರಶ್ನೆ

ನಟ ಸುಶಾಂತ್​ ಸಾವಿನ ಹಿನ್ನೆಲೆಯಲ್ಲಿ ಬಾಲಿವುಡ್​ನ ಘಟಾನುಘಟಿಗಳ ಹೆಸರು ತಳುಕು ಹಾಕಿಕೊಂಡಿದೆ. ಸಲ್ಮಾನ್​ ಖಾನ್​, ಕರಣ್​ ಜೋಹರ್​, ಮಹೇಶ್​ ಭಟ್​ ಸೇರಿ ಸಾಕಷ್ಟು ಖ್ಯಾತನಾಮರ ಹೆಸರು ಸೇರಿಕೊಂಡಿರುವುದು ಈ ಒಂದು ತಿಂಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ. ಇದೀಗ ಇದೇ ವಿಚಾರಣೆ ಬಗ್ಗೆ ನಟಿ ಕಂಗನಾ ಕೆಂಡಾಮಂಡಲರಾಗಿದ್ದಾರೆ.

ಈಗಾಗಲೇ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರನ್ನ ಕರೆಸಿ ವಿಚಾರಣೆ ನಡೆಸಿದ್ದಾರೆ. ಇನ್ನು, ಈ ಕೇಸ್​ನಲ್ಲಿ ಸಲ್ಮಾನ್​ ಖಾನ್​ ಅವರ ಹೆಸರು ತಳುಕು ಹಾಕಿಕೊಂಡಿದ್ದರಿಂದ, ಅವರ ವಿಚಾರಣೆಯನ್ನೂ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಸಲ್ಮಾನ್​ ವಿಚಾರಣೆ ಮಾಡಲಿಲ್ಲ. ಅದಾದ ಬಳಿಕ ಕರಣ್​ಗೂ ವಿಚಾರಣೆಯಿಂದ ವಿನಾಯಿತಿ ಸಿಕ್ಕಿತ್ತು.

ಇದೀಗ ಇದೆಲ್ಲವನ್ನು ಗಮನಿಸಿರುವ ಕಂಗನಾ, ಕರಣ್​ ಜೋಹರ್​, ಮಹೇಶ್ ಭಟ್​ ಮತ್ತು ಆದಿತ್ಯ ಚೋಪ್ರಾ ಅವರ ವಿಚಾರಣೆ ಯಾಕೆ ಮಾಡಿಲ್ಲ ಎಂದು ಮುಂಬೈ ಪೊಲೀಸ್​ಗೆ ಪ್ರಶ್ನೆ ಮಾಡಿದ್ದಾರೆ.

ಬಾಲಿವುಡ್​ನಲ್ಲಿನ ನೆಪೋಟಿಸಂ ಬಗ್ಗೆ ಧ್ವನಿ ಎತ್ತಿದ್ದ ಕಂಗನಾ, ಸುಶಾಂತ್​ ಸಾವಿಗೆ ನ್ಯಾಯಕ್ಕಾಗಿ ಹೋರಾಟಕ್ಕಿಳಿದಿದ್ದರು. ಈ ಸಾವಿನ ಹಿಂದೆ ದೊಡ್ಡವರ ಕೈವಾಡ ಎಂದು ಆರೋಪಿಸಿ ಸೂಕ್ತ ತನಿಖೆಗೆ ಒತ್ತಾಯಿಸಿದ್ದರು. ಹೀಗಿರುವಾಗಲೇ ಖ್ಯಾತ ನಾಮ ವ್ಯಕ್ತಿಗಳನ್ನು ವಿಚಾರಣೆಯಿಂದ ಕೈ ಬಿಟ್ಟಿದ್ದೇ ತಡ ಕಂಗನಾ ಪೊಲೀಸ್ ಇಲಾಖೆಯ ನಡೆಯನ್ನು ಪ್ರಶ್ನಿಸಿದ್ದಾರೆ.

ಸುಶಾಂತ್​ ಆತ್ಮಹತ್ಯೆಯಲ್ಲಿ ಕರಣ್​ ಅವರ ನೇರ ಪಾತ್ರ ಇಲ್ಲದಿದ್ದರೂ, ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕಳೆದ ಒಂದು ತಿಂಗಳನಿಂದ ಸಾಕಷ್ಟು ಚರ್ಚೆಯಾಗಿದೆ. ಇನ್ನು ಸುಶಾಂತ್​ ಅವರ ಬಿಹಾರದ ಅಭಿಮಾನಿಗಳು, ಕರಣ್​ ಅವರ ಪ್ರತಿಕೃತಿ ದಹಿಸಿ, ಅವರ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. (ಏಜೆನ್ಸೀಸ್​)