ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಹಿಂದಿ ಚಿತ್ರರಂಗಕ್ಕೆ ಗುಡ್ಬೈ ಹೇಳಿದ್ದೇಕೆ ಕಮಲ್ ಹಾನಸ್? ಇಲ್ಲಿದೆ ಅಚ್ಚರಿ ಉತ್ತರ... Kamal Haasan
- ಬಾಲಿವುಡ್‌ನ ಯಶಸ್ಸಿನ ಅಲೆಯಲ್ಲಿರುವಾಗಲೇ ಕಮಲ್ ಹಾಸನ್ ಹಿಂದಿ ಚಿತ್ರರಂಗ ತೊರೆದಿದ್ದೇಕೆ?
- ಅಂದಿನ ಬಾಲಿವುಡ್ ಕೆಲಸದ ಶೈಲಿ ಬೇಸರ ತರಿಸಿತ್ತು ಎಂದ ಕಮಲ್!
- ಕಪ್ಪು ಹಣ ಮುಟ್ಟಲ್ಲ ಅಂದಿದ್ದಕ್ಕೆ ಬಾಲಿವುಡ್‌ನಿಂದ ದೂರ ಸರಿದರಾ ಸಕಲಕಲಾವಲ್ಲಭ ಕಮಲ್ ಹಾಸನ್?
- ಭೂಗತ ಲೋಕದ ಬೆದರಿಕೆಗೆ ಹೆದರದೆ ಬಾಲಿವುಡ್‌ಗೇ 'ಗುಡ್ ಬೈ' ಹೇಳಿದ್ದ ಸ್ಟಾರ್ ನಟ ಕಮಲ್ ಹಾಸನ್
Kamal Haasan : ಸಕಲಕಲಾವಲ್ಲಭ ಕಮಲ್ ಹಾಸನ್ ಅವರು ಪ್ರಮುಖವಾಗಿ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದರು ಕೂಡ ಈ ಹಿಂದೆ ಹಿಂದಿ ಚಿತ್ರರಂಗದಲ್ಲೂ ಅತ್ಯಂತ ಯಶಸ್ಸನ್ನು ಆನಂದಿಸಿದ್ದರು. ಕೇವಲ ಪ್ರಾದೇಶಿಕ ನಟನಾಗಿ ಉಳಿಯದೆ, ಹಿಂದಿ ಭಾಷೆಯಲ್ಲೂ ತಮ್ಮ ಅದ್ಭುತ ನಟನೆಯ ಮೂಲಕ ಉತ್ತರ ಭಾರತದ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಮತ್ತು ಅಲ್ಲಿನ ಮಾರುಕಟ್ಟೆಯಲ್ಲಿ ಗಟ್ಟಿಯಾದ ಹೆಜ್ಜೆಗುರುತು ಮೂಡಿಸುವಲ್ಲಿ ಈ ಹಿರಿಯ ನಟ ಕಮಲ್ ಹಾಸನ್ ಯಶಸ್ವಿಯಾಗಿದ್ದರು. ಆದರೆ, ಯಶಸ್ಸಿನ ಅಲೆಯಲ್ಲಿರುವಾಗಲೇ ಬಾಲಿವುಡ್ ತೊರೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.
ಹೌದು, ಬಾಲಿವುಡ್‌ನಲ್ಲಿ ವ್ಯಾಪಕ ಜನಪ್ರಿಯತೆ ಹಾಗೂ ಭಾರಿ ಮನ್ನಣೆ ಗಳಿಸಿದ ಹೊರತಾಗಿಯೂ, ಕಮಲ್ ಹಾಸನ್ ಅವರು ಹಿಂದಿ ಚಿತ್ರರಂಗವನ್ನು ತೊರೆದರು. ತಮ್ಮ ಈ ನಿರ್ಧಾರದ ಹಿಂದಿನ ಕಾರಣ ಏನೆಂಬುದನ್ನು ವರ್ಷಗಳ ಹಿಂದೆಯೇ ಕಮಲ್ ಹಾಸನ್ ಅವರು ಬಹಿರಂಗಪಡಿಸಿದ್ದರು. ಈ ವೇಳೆ ಅವರ ಹೇಳಿಕೆ ಬಾಲಿವುಡ್‌ನಲ್ಲಿ ಭಾರಿ ಸಂಚಲನ ಮೂಡಿಸಿತ್ತು.
ಅಂದಹಾಗೆ, 1985ರ ನಂತರ ಕಮಲ್ ಹಾಸನ್ ಅವರು ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಬಾಲಿವುಡ್‌ನಿಂದ ದೂರ ಉಳಿದಿದ್ದರು. ತದನಂತರ 1997ರಲ್ಲಿ ಬಿಡುಗಡೆಯಾದ, ಅವರದೇ ತಮಿಳು ಹಿಟ್ ಸಿನಿಮಾ 'ಅವ್ವೈ ಷಣ್ಮುಗಿ' ಚಿತ್ರದ ಹಿಂದಿ ರಿಮೇಕ್ ಆದ 'ಚಾಚಿ 420' ಮೂಲಕ ಅವರು ಮತ್ತೆ ಹಿಂದಿ ಚಿತ್ರರಂಗಕ್ಕೆ ಮರಳಿದರು. ಇದರ ನಂತರ ಅವರು 'ಹೇ ರಾಮ್', 'ಅಭಯ್', 'ಮುಂಬೈ ಎಕ್ಸ್‌ಪ್ರೆಸ್', 'ವಿಶ್ವರೂಪಂ' ಮತ್ತು 'ವಿಶ್ವರೂಪಂ 2' ಸೇರಿದಂತೆ ಹಲವು ದ್ವಿಭಾಷಾ ಸಿನಿಮಾಗಳಲ್ಲಿ ಕಾಣಿಸಿಕೊಂಡರು.
2017ರಲ್ಲಿ ನಡೆದ 'ಇಂಡಿಯಾ ಟುಡೇ ಸೌತ್ ಕಾನ್‌ಕ್ಲೇವ್'ನಲ್ಲಿ ಮಾತನಾಡಿದ್ದ ಕಮಲ್ ಹಾಸನ್, ತಾವು ಬಾಲಿವುಡ್‌ನಲ್ಲಿ ದೀರ್ಘಕಾಲದ ವೃತ್ತಿಜೀವನವನ್ನು ಮುಂದುವರಿಸದಿರಲು ನಿರ್ಧರಿಸಿದ ಕಾರಣಗಳನ್ನು ಹಂಚಿಕೊಂಡಿದ್ದರು. ಆಗಿನ ಕಾಲಘಟ್ಟವೇ ಹಾಗಿತ್ತು. ಹಿಂದಿ ಚಿತ್ರರಂಗಕ್ಕೆ ಹೋಲಿಸಿದರೆ ನಾನು ಬಡ ನಟನಂತಿದ್ದೆ. ನಾನೇ ನನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಆದರೆ, ಬಾಲಿವುಡ್‌ನವರು ಶ್ರೀಮಂತರಾಗಿದ್ದರು ಮತ್ತು ಅತಿಯಾದ ಸೌಲಭ್ಯಗಳನ್ನು ಹೊಂದಿದ್ದರು. ಅವರು ಏಕಕಾಲದಲ್ಲಿ ಆರು ಸಿನಿಮಾಗಳನ್ನು ಮಾಡುತ್ತಿದ್ದರು. ಆ ಕೆಲಸದ ಶೈಲಿ ನನಗೆ ನಿರಾಶಾದಾಯಕವಾಗಿ ಕಂಡಿತು. ಅದು ನಾನು ದೂರ ಸರಿಯಲು ಒಂದು ಕಾರಣ ಎಂದು ಅವರು ಹೇಳಿದ್ದರು.
ಇದರೊಂದಿಗೆ, ಅಂದಿನ ಬಾಲಿವುಡ್ ಚಿತ್ರರಂಗದಲ್ಲಿದ್ದ ಭೂಗತ ಲೋಕದ ಸಂಪರ್ಕಗಳು ಮತ್ತು ಕಪ್ಪು ಹಣದ ಹಾವಳಿ ಕೂಡ ತಾವು ಹಿಂದಿ ಚಿತ್ರರಂಗದಿಂದ ಹೊರಬರಲು ಪ್ರಮುಖ ಪ್ರೇರಣೆಯಾಯಿತು ಎಂಬ ಅಚ್ಚರಿಯ ವಿಷಯವನ್ನು ಕಮಲ್ ಹಾಸನ್ ಬಹಿರಂಗಪಡಿಸಿದ್ದರು.
ಆ ಸಮಯದಲ್ಲಿ ಬಾಲಿವುಡ್‌ನಲ್ಲಿ ಭೂಗತ ಜಗತ್ತಿನ ಕಬಂಧಬಾಹುಗಳು ಅತಿಯಾಗಿದ್ದವು. ಅದನ್ನು ವಿರೋಧಿಸಲು ಅಥವಾ ಅವರ ಬೆದರಿಕೆಗಳಿಗೆ ಶರಣಾಗಲು ನನಗೆ ಇಷ್ಟವಿರಲಿಲ್ಲ. ಜೊತೆಗೆ, ನನ್ನ ಸಿನಿಮಾಗಳಲ್ಲಿ ಕಪ್ಪು ಹಣದ ವ್ಯವಹಾರಕ್ಕೆ ಆಸ್ಪದ ನೀಡಬಾರದು ಎಂದು ನಿರ್ಧರಿಸಿದ ನಟರಲ್ಲಿ ನಾನು ಒಬ್ಬನಾಗಿದ್ದೆ. ಸರ್ಕಾರಗಳು ಕಪ್ಪು ಹಣದ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡುವ ಮೊದಲೇ, ನಾನದನ್ನು ಮುಟ್ಟುವುದಿಲ್ಲ ಎಂದು ನನ್ನ ಸಹೋದರ ಮತ್ತು ನಾನು ತೀರ್ಮಾನಿಸಿದ್ದೆವು. ನಾನು ಗಳಿಸಿದ ಸ್ವಂತ ಹಣದಲ್ಲಿ ಕಾರು ಓಡಿಸಿಕೊಂಡು ನೆಮ್ಮದಿಯಾಗಿದ್ದೆ ಎಂದು ಅವರು ತಮ್ಮ ಅಂದಿನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.
ಅಂದಹಾಗೆ, ಕಮಲ್ ಹಾಸನ್ ಅವರು ಮೊದಲ ಬಾರಿಗೆ ಹಿಂದಿ ಚಿತ್ರರಂಗ ಪ್ರವೇಶಿಸಿದ್ದು ತಮ್ಮ ಮಾರ್ಗದರ್ಶಕರಾದ ಕೆ. ಬಾಲಚಂದರ್ ನಿರ್ದೇಶನದ 'ಆಯಿನಾ' (1974) ಚಿತ್ರದ ಒಂದು ಸಣ್ಣ ಪಾತ್ರದ ಮೂಲಕ. ಆದರೆ ಅವರಿಗೆ ಬಾಲಿವುಡ್‌ನಲ್ಲಿ ದೊಡ್ಡ ಬ್ರೇಕ್ ನೀಡಿದ್ದು 1981ರಲ್ಲಿ ಮೂಡಿಬಂದ 'ಏಕ್ ದೂಜೆ ಕೇ ಲಿಯೇ' ಸಿನಿಮಾ. ಇದು ಬಾಲಚಂದರ್ ಅವರದೇ ತೆಲುಗಿನ ಸೂಪರ್ ಹಿಟ್ 'ಮಾರೋ ಚರಿತ್ರ' ಚಿತ್ರದ ರಿಮೇಕ್ ಆಗಿತ್ತು. ರತಿ ಅಗ್ನಿಹೋತ್ರಿ ಜೊತೆ ಕಮಲ್ ನಟಿಸಿದ್ದ ಈ ರೋಮ್ಯಾಂಟಿಕ್ ಡ್ರಾಮಾ ವಿಮರ್ಶಾತ್ಮಕವಾಗಿ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿ, ಅವರನ್ನು ಬಾಲಿವುಡ್‌ನ ಜನಪ್ರಿಯ ನಟನನ್ನಾಗಿ ಮಾಡಿತು. ಇದರ ಬೆನ್ನಲ್ಲೇ ಅವರು 'ಸನಮ್ ತೇರಿ ಕಸಮ್', 'ಯೇ ತೋ ಕಮಾಲ್ ಹೋ ಗಯಾ' ಮತ್ತು 'ಜರಾ ಸಿ ಜಿಂದಗಿ'ಯಂತಹ ಚಿತ್ರಗಳಲ್ಲಿ ನಟಿಸಿದರು. ತದನಂತರ 1983ರಲ್ಲಿ ಶ್ರೀದೇವಿ ಜೊತೆ ನಟಿಸಿದ 'ಸದ್ಮಾ' ಚಿತ್ರದಲ್ಲಿನ ಅವರ ಅಭಿನಯವು ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನಗಳಲ್ಲಿ ಒಂದಾಗಿ ಇಂದಿಗೂ ಉಳಿದಿದೆ, (ಏಜೆನ್ಸೀಸ್).