ಸಿನಿವಾಣಿ

ಬಿಗ್​ಬಾಸ್​ಗೆ ಯಾರ್ಯಾರು?; ಹರಿದಾಡುತ್ತಿವೆ ಸೆಲೆಬ್ರಿಟಿಗಳ ಹೆಸರುಗಳು...

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಕನ್ನಡದ ‘ಬಿಗ್​ಬಾಸ್’ನ ಎಂಟನೇ ಸೀಸನ್ ಇಷ್ಟೊತ್ತಿಗಾಗಲೇ ಮುಗಿಯುವ ಹಂತದಲ್ಲಿರಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಅದು ನಿಗದಿತ ಸಮಯಕ್ಕೆ ಶುರುವಾಗಲಿಲ್ಲ. ಮತ್ತೊಂದೆಡೆ ಈ ಬಾರಿಯ ‘ಬಿಗ್​ಬಾಸ್’ ಶುರುವಾಗುವುದೇ ಇಲ್ಲ ಎಂದೇ ಹೇಳಲಾಗಿತ್ತು. ಆದರೆ, ಆ ಮಾತುಗಳನ್ನೆಲ್ಲ ತಳ್ಳಿಹಾಕಿದ ಕಲರ್ಸ್ ಕನ್ನಡ ವಾಹಿನಿ, ಇತ್ತೀಚೆಗಷ್ಟೇ ಸೀಸನ್ 8ರ ಪ್ರೋಮೋ ಬಿಡುಗಡೆ ಮಾಡಿದೆ. ಇದೀಗ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದ್ದು, ಪ್ರತಿವರ್ಷದಂತೆ ಈ ವರ್ಷ ಸಹ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸಬಹುದು ಎಂಬ ಊಹಾಪೋಹಗಳು ಶುರುವಾಗಿವೆ.

ಇತ್ತೀಚಿನ ಕೆಲವು ವರ್ಷಗಳಿಂದ ‘ಬಿಗ್ ಬಾಸ್’ ಪ್ರಾರಂಭವಾಗುವವರೆಗೂ ಯಾರೆಲ್ಲ ಸ್ಪರ್ಧಿಸುತ್ತಿದ್ದಾರೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆ ಮಟ್ಟಿಗೆ ಚಾನಲ್​ನವರು ಗೌಪ್ಯತೆ ಕಾಪಾಡಿಕೊಂಡಿರುತ್ತಾರೆ. ಆದರೂ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸಬಹುದು ಎಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದು, ಅದು ಈ ವರ್ಷ ಸಹ ಮುಂದುವರೆದಿದೆ. ಈ ವರ್ಷ ರವಿಶಂಕರ್ ಗೌಡ, ನಟ-ನಿರ್ದೇಶಕ ಶಿವಮಣಿ, ಅನಿರುದ್ಧ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನ, ಯಶ್ ಅವರ ತಾಯಿ ಪುಷ್ಪ ... ಹೀಗೆ ಕೆಲವರ ಹೆಸರು ಕೇಳಿಬರುತ್ತಿದೆ. ಈಗಾಗಲೇ ಯಶ್ ಅವರ ತಾಯಿ ಪುಷ್ಪ ಅವರು ಸ್ಪರ್ಧಿಸುತ್ತಿರುವುದು ಕಪೋಕಲ್ಪಿತ ಸುದ್ದಿ ಎಂದು ಯಶ್ ಅಭಿಮಾನಿಗಳ ಸಂಘ ಸ್ಪಷ್ಟಪಡಿಸಿದೆ.

ಇನ್ನು, ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ರವಿಶಂಕರ್ ಗೌಡ, ‘ಕಳೆದ ಕೆಲ ವರ್ಷಗಳಿಂದ ನನ್ನ ಹೆಸರು ಪ್ರಸ್ತಾಪವಾಗುತ್ತಲೇ ಇದೆ. ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಕೆಲವು ವರ್ಷಗಳ ಹಿಂದೆಯೇ ಆಹ್ವಾನ ಸಿಕ್ಕಿತ್ತು. ಆ ಬಗ್ಗೆ ನಾನು ಒಲವು ತೋರಿಸಿಲ್ಲ. ಸದ್ಯಕ್ಕೆ ಸಿನಿಮಾ, ‘ಮಜಾ ಟಾಕೀಸ್’ ಸೇರಿ ಹಲವು ಕೆಲಸಗಳಲ್ಲಿ ಬಿಜಿಯಾಗಿದ್ದೇನೆ’ ಎಂದಿದ್ದಾರೆ.

ಅನಿರುದ್ಧ ಅವರಿಗೂ 3 ವರ್ಷಗಳ ಹಿಂದೆಯೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತ್ತಂತೆ. ‘ಆಗಲೇ ನನ್ನಿಂದಾಗದು, ಕ್ಷಮಿಸಿ ಎಂದಿದ್ದೆ. ಈಗ ಮತ್ತೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಷಯವಾಗಿ ವಿಡಿಯೋವೊಂದರ ಮೂಲಕ ಸ್ಪಷ್ಟಪಡಿಸಿದ್ದೇನೆ’ ಎನ್ನುತ್ತಾರೆ ನಟ ಅನಿರುದ್ಧ. ಇನ್ನು, ವಿನಯಾ ಪ್ರಸಾದ್ ಸಹ ‘ಬಿಗ್​ಬಾಸ್’ನಲ್ಲಿ ಇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ, ‘ಅಮ್ಮ ಯಾವ ರಿಯಾಲಿಟಿ ಶೋನಲ್ಲೂ ಭಾಗವಹಿ ಸುತ್ತಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ’ ಎಂದು ಅವರ ಪುತ್ರಿ ಪ್ರಥಮಾ ಪ್ರಸಾದ್ ಮನವಿ ಮಾಡಿದ್ದಾರೆ. ಹಾಗಾದರೆ, 8ನೇ ಸೀಸನ್​ನಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ? ಈ ಪ್ರಶ್ನೆಗೆ ಉತ್ತರ ಇನ್ನಷ್ಟೇ ಸಿಗಬೇಕಿದೆ.

ಸದ್ಯ ಹಲವು ಹೆಸರುಗಳು ಹರಿದಾಡುತ್ತಿವೆ, ಅವೆಲ್ಲವೂ ಸುಳ್ಳು. ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಇದೀಗ ತಾನೇ ಶುರುವಾಗಿದೆ. ಯಾರೆಲ್ಲ ಇರಲಿದ್ದಾರೆ ಎಂಬುದು ಶೋ ಪ್ರಾರಂಭವಾದಾಗಲೇ ಗೊತ್ತಾಗಲಿದೆ.

| ಪರಮೇಶ್ವರ ಗುಂಡ್ಕಲ್ ಕಲರ್ಸ್ ಕನ್ನಡ ಬಿಜಿನೆಸ್ ಹೆಡ್