ಬಾಲಿವುಡ್ನಲ್ಲಿ ಹೆಸರು ಮಾಡಿ ಹಾಲಿವುಡ್ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಬಗ್ಗೆ ಹೊಸ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಬಾಂಬ್ ಸಿಡಿಸಿದೆ. 2014ರಲ್ಲೇ ಅಮೆರಿಕ ಮೂಲದ ವ್ಯಕ್ತಿಯೊಬ್ಬನನ್ನು ಪ್ರಿಯಾಂಕಾ ಮದುವೆಯಾಗಿದ್ದರಂತೆ! ಹಾಗಂತ ಆ ಕೌತುಕದ ವಿಚಾರವನ್ನು ಪ್ರಿಯಾಂಕಾ ಬಹಿರಂಗಪಡಿಸಿಲ್ಲ. ಬದಲಿಗೆ ಮದುವೆಯಾಗಿದ್ದ ಪತಿ ಮಹಾಶಯನೇ ಆರು ವರ್ಷದ ಹಿಂದಿನ ಆ ಘಟನೆಯನ್ನು ಮತ್ತೆ ನೆನಪಿಸಿಕೊಂಡಿದ್ದಾನೆ. ಟ್ವಿಟರ್ನಲ್ಲಿ ಮದುವೆಯ ಫೋಟೋ ಸಹ ಶೇರ್ ಮಾಡಿಕೊಂಡಿದ್ದಾರೆ.
ಹೌದು, ಆ ವ್ಯಕ್ತಿಯ ಹೆಸರು ಬ್ರೆಂಡಮ್ ಚಸ್ಟರ್. ಮೂಲತಃ ಅಮೆರಿಕಾದ ದಕ್ಷಿಣ ಫ್ಲೋರಿಡಾದವನು. ವೃತ್ತಿಯಲ್ಲಿ ಅಡ್ವೊಕೇಟ್ ಆಗಿರುವ ಬ್ರೆಂಡಮ್, 2014ರಲ್ಲಿ ಪ್ರಿಯಾಂಕಾ ಅವರನ್ನು ಭೇಟಿಯಾಗಿದ್ದ. ಭಾರತೀಯ ಸಂಪ್ರದಾಯದಂತೆ ಹೂವಿನ ಮಾಲೆ ಹಾಕಿದ್ದ. ಪೋಟೋ ಸಹ ಕ್ಲಿಕ್ಕಿಸಿಕೊಂಡಿದ್ದ. ಆ ಆರು ವರ್ಷದ ಫೋಟೋವನ್ನು ಇದೀಗ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡು, ‘ನಾನು 2014ರಲ್ಲೇ ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆಯಾಗಿದ್ದೆ. ಅವರ ಕೊರಳಿಗೆ ಹೂ ಮಾಲೆ ಹಾಕಿದ್ದೆ. ಭಾರತೀಯ ಸಂಪ್ರದಾಯದ ಪ್ರಕಾರ ಹೀಗೆ ಮಾಲೆ ಹಾಕಿದರೆ ಮದುವೆಯಾದಂತೆ. ಭಾರತೀಯ ಮಾಧ್ಯಮ ಇದನ್ನು ಗಮನಿಸಿದರೆ, ಮದುವೆಯಾದ ಬಗ್ಗೆ ಪೂರ್ತಿ ಸಂದರ್ಶನ ನೀಡಬಲ್ಲೆ’ ಎಂದು ಬರೆದುಕೊಂಡಿದ್ದಾನೆ.
ಬ್ರೆಂಡಮ್ ಪೋಸ್ಟ್ಗೆ ಸಾಕಷ್ಟು ಕಮೆಂಟ್ಗಳು ಸಂದಾಯವಾಗಿದ್ದು, ನೇರವಾಗಿ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಒಂದು ನಿಮಿಷದಲ್ಲಿ ಫೇಮಸ್ ಆಗಬೇಕೆಂದು ಈ ರೀತಿಯಲ್ಲಿ ಮಾಡುತ್ತಿದ್ದೀಯಾ? ನಿಕ್ ಸ್ಥಿತಿ ಏನಾಗಿರಬೇಡ, ಎಂದೂ ಕಮೆಂಟಿಸಿದ್ದಾರೆ. ಆದರೆ, ಈ ಬಗ್ಗೆ ಪ್ರಿಯಾಂಕಾ ತುಟಿ ಬಿಚ್ಚಿಲ್ಲ. ಅಂದಹಾಗೆ, 2018ರ ಡಿಸೆಂಬರ್ನಲ್ಲಿ ರಾಜಸ್ತಾನದ ಜೋದ್ಪುರದಲ್ಲಿ ನಿಕ್ ಮತ್ತು ಪ್ರಿಯಾಂಕಾ ಮದುವೆಯಾಗಿದ್ದಾರೆ. (ಏಜೆನ್ಸೀಸ್)