ಸಿನಿವಾಣಿ

ದಕ್ಷಿಣದ ಮಗಳು ದೀಪಿಕಾಗೆ ಸ್ವಾಗತ; ಅರಿಶಿನ-ಕುಂಕುಮ ನೀಡಿದ ಚಿತ್ರತಂಡ

Webdesk - Ravikanth

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಎಲ್ಲ ಸಿನಿಮಾಗಳಿಗಿಂತ ಪ್ರಭಾಸ್ ಮತ್ತು ಅಮಿತಾಭ್ ಬಚ್ಚನ್ ಜತೆ ನಟಿಸುತ್ತಿರುವ, ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರ ತುಂಬ ವಿಶೇಷ. ಏಕೆಂದರೆ ಅದು ದೀಪಿಕಾ ನಟಿಸುತ್ತಿರುವ ಮೊದಲ ತೆಲುಗು ಚಿತ್ರ. ಇದೀಗ ಆ ಸಿನಿಮಾ ಶೂಟಿಂಗ್ ಶುರುವಾಗಿದೆ. ಅಷ್ಟೇ ಅಲ್ಲ ದೀಪಿಕಾಗೆ ತಂಡ ವಿಶೇಷ ಸ್ವಾಗತವನ್ನೂ ನೀಡಿದೆ.

ದಕ್ಷಿಣ ಭಾರತದ ಕಡೆಗಳಲ್ಲಿ ಹೆಣ್ಣುಮಗಳನ್ನು ಮನೆ ಅಥವಾ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಾದರೆ, ಅವರಿಗೆ ಅರಿಶಿನ, ಕುಂಕುಮ, ಸೀರೆ, ಬಳೆ, ಹೂವು ನೀಡಿ ಕರೆಯುವುದು ವಾಡಿಕೆ. ಆ ಪದ್ಧತಿಯಂತೆ ಚಿತ್ರತಂಡ ವಿಶೇಷ ಕಿಟ್​ವೊಂದನ್ನು ದೀಪಿಕಾಗೂ ಕಳುಹಿಸಿದೆ. ಅದರಲ್ಲಿ ಪತ್ರವೊಂದನ್ನು ಇರಿಸಿದೆ.

‘ಜಾಗತಿಕವಾಗಿ ಎಲ್ಲರ ಹೃದಯ ಗೆದ್ದಿರುವ ದಕ್ಷಿಣ ಭಾರತದ ಮಗಳಿಗೆ, ದೇಶದ ರಾಣಿಗೆ ಸ್ವಾಗತ. ಬನ್ನಿ ಒಟ್ಟಾಗಿ ಜಗತ್ತು ಗೆಲ್ಲೋಣ’ ಎಂದು ಬರೆದು ಸ್ವಾಗತಿಸಿದ್ದಾರೆ. ಈ ಪತ್ರದ ಸಮೇತ ಫೋಟೋವನ್ನು ದೀಪಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ. ಸದ್ಯ ಶಾರುಖ್ ಖಾನ್ ಜತೆಗೆ ‘ಪಠಾಣ್’, ಹೃತಿಕ್ ಜತೆಗಿನ ‘ಫೈಟರ್’ ಸೇರಿ ಹಲವು ಸಿನಿಮಾಗಳಲ್ಲಿ ದೀಪಿಕಾ ಬಿಜಿಯಾಗಿದ್ದಾರೆ. -ಏಜೆನ್ಸೀಸ್