ತಮಿಳು ರಾಕರ್ಸ್ ಎಂದರೆ ಸಿನಿಮಾ ಮಂದಿಗೆ ದುಃಸ್ವಪ್ನ. ಸಿನಿಮಾಗಳ ಪೈರಸಿ ಮಾಡುವುದರಲ್ಲಿ ತಮಿಳು ರಾಕರ್ಸ್ ಎತ್ತಿದ ಕೈ. ಶುಭ ಶುಕ್ರವಾರ ಬಿಡುಗಡೆಯಾದ ಸಿನಿಮಾ ಅಂದು ಮಧ್ಯಾಹ್ನದೊಳಗೇ ಆನ್ಲೈನ್ನಲ್ಲಿ ಲಭ್ಯವಾಗುವಷ್ಟರ ಮಟ್ಟಿಗೆ ಪೈರಸಿ ಬೆಳೆದು ನಿಂತಿದೆ. ಮಾತ್ರವಲ್ಲ ಓಟಿಟಿಯಲ್ಲಿ ಬರುವ ಸಿನಿಮಾ, ವೆಬ್ ಸರಣಿಗಳೂ ಪೈರಸಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗೆ ಬಹುತೇಕ ಎಲ್ಲ ಚಿತ್ರರಂಗಗಳನ್ನು ಬೆಂಬಿಡದ ಭೂತದಂತೆ ಕಾಡುತ್ತಿರುವ ಪೈರಸಿ ಸೈಟ್ಗಳಲ್ಲಿ ಪ್ರಮುಖವಾದುದು ತಮಿಳ್ ರಾಕರ್ಸ್.
ತಮಿಳು ಚಿತ್ರರಂಗ ಕಳೆದ ಕೆಲವು ವರ್ಷಗಳಿಂದ ತಮಿಳ್ ರಾಕರ್ಸ್ನ ಸಿನಿಗಳ್ಳರನ್ನು ಹಿಡಿಯಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಆದರೆ, ಈ ತಮಿಳ್ ರಾಕರ್ಸ್ ಯಾರು? ಎಲ್ಲಿದ್ದಾರೆ? ಪೈರಸಿ ಹೇಗೆ ಮಾಡುತ್ತಾರೆ? ಹೇಗೆ ತಪ್ಪಿಸಿಕೊಳ್ಳುತ್ತಿದ್ದಾರೆ? ಇವರ ಹಿಂದೆ ಇರುವ ಕಾಣದ ಕೈಗಳು ಯಾರು? ಎಂಬುದು ಇದುವರೆಗೂ ಯಾರಿಗೂ ಗೊತ್ತಿಲ್ಲ. ಈಗ ಅದೇ ಹೆಸರಿನ ಪೈರಸಿ ಕುರಿತ ವೆಬ್ ಸರಣಿಯೊಂದು ಸಿದ್ಧವಾಗಿದೆ.
ಹೌದು, ‘ತಮಿಳ್ ರಾಕರ್ಸ್’ ಪೈರಸಿ ಕುರಿತ ವೆಬ್ ಸರಣಿ. ಪೈರಸಿ ಮಾಡುವ ಸಿನಿಗಳ್ಳರ ಬೆನ್ನು ಹತ್ತಿ ಹೋಗುವ ಪೊಲೀಸ್ ಅಧಿಕಾರಿಯಾಗಿ ಅರುಣ್ ವಿಜಯ್ ನಟಿಸಿದ್ದು, ವಾಣಿ ಭೋಜನ್, ಐಶ್ವರ್ಯಾ ಮೆನನ್, ವಿನೋದಿನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರಿವಳಗನ್ ನಿರ್ದೇಶನವಿದೆ. ಶೀಘ್ರದಲ್ಲಿಯೇ ಓಟಿಟಿಯಲ್ಲಿ ‘ತಮಿಳ್ ರಾಕರ್ಸ್’ ರಿಲೀಸ್ ಆಗಲಿದೆ.