ಚೆನ್ನೈ : ನಟಿ ಕೀರ್ತಿ ಸುರೇಶ್ ( Keerthy Suresh ) ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ನಟಿಸಿದ್ದಾರೆ. ವಿಜಯ್, ಸೂರ್ಯ, ವಿಕ್ರಮ್, ಶಿವಕಾರ್ತಿಕೇಯನ್, ನಾನಿ, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.
ಅಂದಹಾಗೆ, ಕೀರ್ತಿ ಸುರೇಶ್ ಅವರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ತನ್ನ ಬಹುಕಾಲದ ಪ್ರಿಯಕರ ಆಂಥೋನಿ ಥಟ್ಟಿಲ್ ಅವರನ್ನು ವಿವಾಹವಾದರು. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಂಥೋನಿ ಅವರು ಕೇರಳದ ಕೊಚ್ಚಿ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ವ್ಯವಹಾರಗಳನ್ನು ಹೊಂದಿದ್ದಾರೆ. ಕಾಲೇಜು ದಿನಗಳಲ್ಲಿ ಪ್ರಾರಂಭವಾದ ಪರಿಚಯ ಪ್ರೀತಿಗೆ ತಿರುಗಿ, ಈಗ ವೈವಾಹಿಕ ಸಂಬಂಧದೊಂದಿಗೆ ಮುಂದುವರಿದಿದೆ. ಸುಮಾರು 15 ವರ್ಷಗಳ ಕಾಲ ರಹಸ್ಯವಾಗಿಡಲಾಗಿದ್ದ ಅವರ ಪ್ರೀತಿ ಮದುವೆಯೊಂದಿಗೆ ಜಗತ್ತಿಗೆ ಬಹಿರಂಗವಾಯಿತು. ಆದರೆ, ಕೀರ್ತಿ ಅವರು ಇತ್ತೀಚೆಗೆ ಮದುವೆಗೆ ಏಕೆ ಇಷ್ಟು ಸಮಯ ತೆಗೆದುಕೊಂಡಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಬಹುಭಾಷ ನಟ ಜಗಪತಿ ಬಾಬು ಅವರು ನಡೆಸಿಕೊಡುವ "ಜಯಮ್ಮು ನಿಶ್ಚಯಮ್ಮು ರಾ" ಹೆಸರಿನ ಟಾಕ್ ಶೋನಲ್ಲಿ ಕೀರ್ತಿ ಸುರೇಶ್ ಅವರು ತಮ್ಮ ಮದುವೆ ಮತ್ತು ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾವಿಬ್ಬರು ಮದುವೆಯಾಗಲು ತುಂಬಾ ಸಮಯ ತೆಗೆದುಕೊಂಡೆವು ಎಂದಿದ್ದಾರೆ. ನಮ್ಮ ಕಾಲೇಜು ದಿನಗಳಲ್ಲಿ (2010) ನಾವು ಪ್ರೀತಿಸುತ್ತಿದ್ದೆವು. ಆದರೆ, ನಾನು ಮೊದಲು ನನ್ನ ಅಧ್ಯಯನವನ್ನು ಪೂರ್ಣಗೊಳಿಸಬೇಕೆಂದು ಯೋಚಿಸಿದೆ. ಆ ಸಮಯದಲ್ಲಿ ನಾನಿನ್ನೂ ನನ್ನ ವೃತ್ತಿ ಮಾರ್ಗವನ್ನು ನಿರ್ಧರಿಸಿರಲಿಲ್ಲ. ಆದರೆ, ನಾವಿಬ್ಬರೂ ಜೀವನದಲ್ಲಿ ನೆಲೆಸಿದ ನಂತರವೇ ಮದುವೆಯಾಗಲು ನಿರ್ಧರಿಸಿದೆವು ಎಂದು ಕೀರ್ತಿ ಸುರೇಶ್ ಹೇಳಿದರು.
ನಾನು ಕಳೆದ ಆರು ವರ್ಷಗಳಿಂದ ಸಿನಿಮಾಗಳಲ್ಲಿ ಬಿಜಿಯಾಗಿದ್ದೇನೆ. ಇದೇ ಸಮಯದಲ್ಲಿ ಅವರು ಕತಾರ್‌ನಲ್ಲಿದ್ದರು. ಅಲ್ಲಿ ಅವರು ತೈಲ ಉದ್ಯಮದಲ್ಲಿ ವ್ಯವಹಾರ ಮಾಡುತ್ತಿದ್ದರು. ಹೀಗಿರುವಾಗ ನಮ್ಮ ನಮ್ಮ ಮನೆಯವರಿಗೆ ಮದುವೆ ವಿಚಾರ ಹೇಳುವುದು ಉತ್ತಮ ಎಂದು ಭಾವಿಸಿದ್ದೆವು. ಆದರೆ, ಮನೆಯಲ್ಲಿ ಧರ್ಮದ ಬಗ್ಗೆ ಏನಾದರೂ ಭಿನ್ನಾಭಿಪ್ರಾಯಗಳು ಬರಬಹುದು ಎಂಬ ಭಯವೂ ನನಗಿತ್ತು. ಆದರೆ, ಒಂದು ದಿನ ನಾನು ನನ್ನ ತಂದೆಯ ಬಳಿಗೆ ಹೋಗಿ ಆಂಥೋನಿ ಬಗ್ಗೆ ಹೇಳಿದೆ. ಆ ಸಮಯದಲ್ಲಿ, ನನ್ನ ತಂದೆಯಿಂದ ಯಾವುದೇ ವಿರೋಧವಿರಲಿಲ್ಲ. ಅವರು ಮದುವೆಗೆ ಒಪ್ಪಿಕೊಂಡರು. ನಾಲ್ಕು ವರ್ಷಗಳ ಹಿಂದೆ ನನ್ನ ಪ್ರೀತಿಯ ಬಗ್ಗೆ ನನ್ನ ತಂದೆಗೆ ಹೇಳಿದ್ದೆ ಎಂದು ಕೀರ್ತಿ ನೆನಪಿಸಿಕೊಂಡರು.
ಇದನ್ನೂ ಓದಿ: ಯುವಜನರಲ್ಲಿ ಹೃದಯಾಘಾತಕ್ಕೆ ಈ 6 ವಿಷಯಗಳೇ ಮುಖ್ಯ ಕಾರಣ! ಬದಲಾವಣೆ ಮಾಡಿಕೊಂಡ್ರೆ ಉತ್ತಮ | Heart Health
ಅಂದಹಾಗೆ, ಕೀರ್ತಿ ಸುರೇಶ್ ಮತ್ತು ಆಂಟೋನಿ ಥಟ್ಟಿಲ್ 2024, ಡಿಸೆಂಬರ್ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಮದುವೆಗೆ ಸಂಬಂಧಿಸಿದ ಫೋಟೋಗಳನ್ನು ಸ್ವತಃ ಕೀರ್ತಿ ಸುರೇಶ್ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಸಮಯದಲ್ಲಿ ಫೋಟೋಗಳು ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಅಂದಹಾಗೆ ಕೀರ್ತಿ ಮತ್ತು ಆಂಟೋನಿ ಒಂದೇ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದರು. ಹೈಸ್ಕೂಲ್ ದಿನಗಳಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆಂಟೋನಿ ಕೀರ್ತಿಗಿಂತ ಎರಡು ವರ್ಷ ದೊಡ್ಡವರು. ಕೊಚ್ಚಿ ಮೂಲದ ಆಂಟೋನಿ ದೋಹಾದಲ್ಲಿ ಉದ್ಯಮಿಯಾಗಿದ್ದಾರೆ. ಆಂಟೋನಿ ಕೊಚ್ಚಿ ಮೂಲದ ಆಸ್ಪರೋಸ್ ವಿಂಡೋಸ್ ಸಲ್ಯೂಷನ್ಸ್ ಎಂಬ ಕಂಪನಿಯ ಮಾಲೀಕರಾಗಿದ್ದಾರೆ.
ಅಂದಹಾಗೆ ಕೀರ್ತಿ ಸುರೇಶ್ ಮಲಯಾಳಂ ನಿರ್ಮಾಪಕ ಸುರೇಶ್ ಮತ್ತು ನಟಿ ಮೇನಕಾ ಅವರ ಪುತ್ರಿ. ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ಕೀರ್ತಿ ಮಲಯಾಳಂ ಚಿತ್ರ ಗೀತಾಂಜಲಿ ಮೂಲಕ ನಟಿಯಾಗಿ ಬಡ್ತಿ ಪಡೆದರು. ಸದ್ಯ ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಮದುವೆಯಾದ ಬಳಿಕ ಸಿನಿಮಾ ಅವಕಾಶಗಳು ಕಡಿಮೆಯಾಗಿವೆ. (ಏಜೆನ್ಸೀಸ್)