ಸಿನಿವಾಣಿ

ನಿರ್ಮಾಪಕರು ಉಳಿಯಲಿ, ಓಟಿಟಿ ಬಗ್ಗೆ ಜಗ್ಗೇಶ್ ಹೇಳಿದ್ದೇನು?

vinaymk1969

ಬೆಂಗಳೂರು: ಚಿತ್ರಮಂದಿರಗಳಿಗಿಂಥ ಮುಂಚಿತವಾಗಿ ಓವರ್ ದಿ ಟಾಪ್ (ಓಟಿಟಿ) ಅಥವಾ ಡಿಜಿಟಲ್ ವೇದಿಕೆಗಳಲ್ಲಿ ಚಲನಚಿತ್ರಗಳು ನೇರವಾಗಿ ಬಿಡುಗಡೆಯಾಗುತ್ತಿರುವ ಬಗ್ಗೆ ದೇಶಾದ್ಯಂತ ಸಾಕಷ್ಟು ಚರ್ಚೆ ಆಗುತ್ತಿದೆ. ಕೆಲವರು ಇದು ಸಣ್ಣ ಚಿತ್ರಗಳಿಗೆ ಬಹಳ ಉಪಕಾರಿ ಎಂದರೆ, ಇನ್ನೂ ಕೆಲವರು ಈ ವ್ಯವಸ್ಥೆಯಿಂದ ಚಿತ್ರಮಂದಿರಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ ಎಂದಿದ್ದಾರೆ. ಇನ್ನು ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ಮೊದಲಿಗೆ ನಿರ್ಮಾಪಕರನ್ನು ಉಳಿಸುವ ಕೆಲಸ ಆಗಬೇಕು ಎಂದು ಹೇಳಿದ್ದಾರೆ. ಸೋಮವಾರ, ಓಟಿಟಿ ವಿಷಯವಾಗಿ ಅವರು ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ. ಅಂಥ ಕೆಲ ಅಭಿಪ್ರಾಯಗಳು ಇಲ್ಲಿವೆ.

ಪರಭಾಷೆ ನಿರ್ವಪಕರು, ನಿರ್ದೇಶಕರಿಗೆ ಬಿಲ್ಡಪ್ ಕೊಟ್ಟು, ಕರ್ನಾಟಕ ಎಂದರೆ ಇಷ್ಟೆ ಜನ ಅಂತ ಮುದ್ರೆಒತ್ತಿಸಿ, ಡಬ್ಬಿಂಗ್ ರೈಟ್ಸ್ ನೂರಾರು ಪಡೆದು, ಉದ್ಯಮ ಕಬಳಿಸಿ ಬಲಿಷ್ಟರಾಗಿದ್ದಾರೆ. ಅಂಥವರ ಕಪಿಮುಷ್ಟಿ ಯಿಂದ ಉದ್ಯಮ ಹೊರಬಂದರೆ, ಹೊಸ ನಿರ್ವಪಕರು, ನಿರ್ದೇಶಕರು, ನಟ-ನಟಿ ಹೇರಳವಾಗಿ ಬೆಳವಣಿಗೆ ಆಗಿ ಕನ್ನಡದ ಮುಂದಿನ ಆಸ್ತಿ ಆಗುತ್ತಾರೆ!

ಇದರಲ್ಲಿ ನಿರ್ವಪಕರಿಗೆ ಯಾವ ವ್ಯತ್ಯಾಸವೂ ಇಲ್ಲ. ಕಾರಣ ಟಿವಿ ಮತ್ತು ಚಿತ್ರಮಂದಿರ ಉಳ್ಳವರ ದೊಡ್ಡ ಲಾಬಿಯಾಗಿತ್ತು. ಯಾವ ಲಾಬಿ ಇಲ್ಲದವರ ಗೋಳಾಗಿತ್ತು. ಈಗ ಓಟಿಟಿಯಲ್ಲೂ ಇದೇ ಗತಿ ಮುಂದುವರೆದು, ಉಳ್ಳವರಿಗೆ ಮಾತ್ರ ದಕ್ಕಿ, ಹೊಸಬರು ಅದೇ ಸಂಕಷ್ಟದ ಸುಳಿಯಲ್ಲಿ ಉಳಿಯುತ್ತಾರೆ. ಎಲ್ಲರಿಗೂ ಸಹಾಯವಾಗುವಂತಹ ಕೆಲವು ಷರತ್ತುಗಳು ಇರಬೇಕು.

ಸಿನಿಮಾಗಾಗಿಯೇ ಬಾಳುತ್ತಿರುವ ಹಿರಿಯರು ಒಗ್ಗಟ್ಟಾಗಿ ಒಂದು ವೇದಿಕೆ ರಚಿಸಿ, ನಿಸ್ವಾರ್ಥ ಪ್ರಯತ್ನ ಮಾಡಿದರೆ ಉದ್ಯಮ ಉಳಿಯುತ್ತದೆ. ಇಲ್ಲದಿದ್ದರೆ ಪರಭಾಷೆಯ ಚಿತ್ರಗಳು ರಾಜರಂತೆ, ನಮ್ಮ ನಮ್ಮ ಭಾಷೆಯನ್ನು ಆಕ್ರಮಿಸಿ, ನಮ್ಮ ಭಾಷೆ ಗುಲಾಮರಂತೆ ಆಗುವುದು ನಿಶ್ಚಿತ. ನಮ್ಮ ಚಿತ್ರರಂಗಕ್ಕೆ ನಮ್ಮವರೇ ಶತ್ರುಗಳು.

ನನ್ನ ಅನಿಸಿಕೆ ಅಕ್ಷರವಾಗಿ ಇಲ್ಲಿ ಉಳಿಯದೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚೆಯಾಗಲಿ. ಈ ವಿಷಯದಲ್ಲಿ ಕನ್ನಡ ನಿರ್ವಪಕರ ಪರವಾಗಿ ನಿಲ್ಲಬೇಕು ಎಂದು ವಿನಂತಿ. ಹೊಸಬರು ನಮ್ಮಂತೆ ಬೆಳೆದು ಕನ್ನಡಚಿತ್ರರಂಗ ಉಳಿಸಲಿ ಎಂಬ ಆಶಾಭಾವನೆ.