Veg Diet during Nagabandham shoot: 'ವಜ್ರಕಾಯ' ಸಿನಿಮಾ ಮೂಲಕ ಭಾರಿ ಸಂಚಲನ ಮೂಡಿಸಿದ್ದ ನಭಾ ನಟೇಶ್ ಅವರು ಈಗ ತೆಲುಗು, ತಮಿಳು ಸೇರಿದಂತೆ ಪರಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಜುಲೈ 3 ರಂದು ಅವರ ಹೊಸ ಸಿನಿಮಾ 'ನಾಗಬಂಧಂ' ತೆರೆಕಾಣಲು ಸಜ್ಜಾಗಿದೆ. ಈ ದೃಶ್ಯ ವೈಭವದ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡತಿ ನಭಾ ನಟೇಶ್, ಸಿನಿಮಾ ಮತ್ತು ತಮ್ಮ ಪಾತ್ರದ ಕುರಿತು ಹಲವು ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸಿನಿಮಾಗಾಗಿ ಸಸ್ಯಹಾರಿಗಳಾಗಿದ್ದೆವು
ನಾಗಬಂಧಂ ಸಿನಿಮಾಗಾಗಿ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಬೃಹತ್ ಮತ್ತು ಅತ್ಯಂತ ನೈಜವಾದ ಪ್ರತಿಕೃತಿಯನ್ನು (ಸೆಟ್) ನಿರ್ಮಿಸಲಾಗಿತ್ತು. ದೇವಸ್ಥಾನದ ಸೆಟ್‌ನಲ್ಲಿದ್ದ ಆಧ್ಯಾತ್ಮಿಕ ವಾತಾವರಣಕ್ಕೆ ಗೌರವ ಸಲ್ಲಿಸಲು ಇಡೀ ಚಿತ್ರತಂಡವೇ ವಿಶೇಷ ಶಿಸ್ತನ್ನು ರೂಢಿಸಿಕೊಂಡಿತ್ತು. ಪ್ರತಿದಿನ ಶೂಟಿಂಗ್ ಆರಂಭವಾಗುವ ಮುನ್ನ ಸೆಟ್‌ನಲ್ಲಿ ಸಾಂಪ್ರದಾಯಿಕ ಪೂಜೆ-ಪುನಸ್ಕಾರಗಳು ನಡೆಯುತ್ತಿದ್ದವು. ಅಷ್ಟೇ ಅಲ್ಲದೆ, ಆ ಶೆಡ್ಯೂಲ್‌ನ ಸಂಪೂರ್ಣ ಚಿತ್ರೀಕರಣ ಮುಗಿಯುವವರೆಗೂ ಇಡೀ ಚಿತ್ರತಂಡ ಕಟ್ಟುನಿಟ್ಟಾಗಿ ಶಾಖಾಹಾರಿ ಆಹಾರ ಪದ್ಧತಿಯನ್ನೇ ಅನುಸರಿಸಿತ್ತು ಎಂದು ನಭಾ ನಟೇಶ್ ಬಹಿರಂಗಪಡಿಸಿದ್ದಾರೆ.
ಆಧ್ಯಾತ್ಮಿಕ ಸಿನಿಮಾದಲ್ಲಿ ಚಿತ್ರದಲ್ಲಿ ನಭಾ ನಟೇಶ್ 'ಪಾರ್ವತಿ' ಎಂಬ ವಿಭಿನ್ನ ಹಾಗೂ ಶಕ್ತಿಶಾಲಿ ಪಾತ್ರದಲ್ಲಿ ನಟಿಸಿದ್ದಾರೆ. "ನಾನು ಇದುವರೆಗೆ ಮಾಡಿರುವ ಪಾತ್ರಗಳಿಗಿಂತ ಪಾರ್ವತಿ ಪಾತ್ರ ಸಂಪೂರ್ಣ ಭಿನ್ನವಾಗಿದೆ. ಆಕೆ ಸಂಪ್ರದಾಯಗಳಿಗೆ ಬದ್ಧಳಾಗಿದ್ದರೂ, ಅಪಾರ ಧೈರ್ಯಶಾಲಿಯಾಗಿದ್ದಾಳೆ. ಕಥೆಯ ಪ್ರತಿಯೊಂದು ಪ್ರಮುಖ ತಿರುವುಗಳೂ ಆಕೆಯ ನಿರ್ಧಾರಗಳ ಮೇಲೆಯೇ ಆಧಾರಿತವಾಗಿವೆ. ಇದು ನಿಸ್ಸಂದೇಹವಾಗಿ ನನ್ನ ವೃತ್ತಿಜೀವನದಲ್ಲೇ ಅತ್ಯಂತ ಪ್ರಬಲವಾದ ಪಾತ್ರ ಎಂದು ನಭಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
5,000 ನೃತ್ಯಗಾರರು ಭಾಗಿ
ನಾಗಬಂಧಂ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಭಕ್ತಿಪ್ರಧಾನ ಹಾಡಿನ ಬಗ್ಗೆಯೂ ನಭಾ ಮಾತನಾಡಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ನಿರ್ದೇಶನದಲ್ಲಿ, ಬರೋಬ್ಬರಿ 5,000 ನೃತ್ಯಗಾರರನ್ನು ಬಳಸಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ಹಾಡು ಭವ್ಯತೆ ಮತ್ತು ಭಕ್ತಿಯ ಅದ್ಭುತ ಸಮ್ಮಿಲನವಾಗಿದ್ದು, ಬೃಂದಾವನದ ಆಧ್ಯಾತ್ಮಿಕ ಉತ್ಸವದ ವಾತಾವರಣವನ್ನು ಕಣ್ಣಿಗೆ ಕಟ್ಟುವಂತೆ ಶ್ರೀಮಂತ ದೃಶ್ಯಗಳ ಮೂಲಕ ಮರುಸೃಷ್ಟಿಸಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್).