ಲಾಕ್ಡೌನ್ ನಂತರ ಎಲ್ಲಾ ರಾಜ್ಯಗಳಲ್ಲೂ ಚಿತ್ರೀಕರಣ ಚಟುವಟಿಕೆಗಳನ್ನು ಪ್ರಾರಂಭಿಸುವುದಕ್ಕೆ ಅಲ್ಲಿನ ಸರ್ಕಾರಗಳು ಗ್ರೀನ್ ಸಿಗ್ನಲ್ ನೀಡಿವೆ. ಆದರೂ ಕನ್ನಡ ನಟರನ್ನು ಬಿಟ್ಟು, ಬೇರೆಲ್ಲಾ ಭಾಷೆಯ ಸ್ಟಾರ್ ನಟರುಗಳು ಚಿತ್ರೀಕರಣ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಈಗಾಗಲೇ 15 ದಿನಗಳಿಂದ ಸುದೀಪ್, 'ಫ್ಯಾಂಟಮ್' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸದ್ಯದಲ್ಲೇ ಶಿವರಾಜಕುಮಾರ್ ಅವರು ಸಹ 'ಭಜರಂಗಿ 2' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಯಶ್, ಮುರಳಿ, ಧ್ರುವಾ ಸರ್ಜಾ ಸೇರಿದಂತೆ ಮಿಕ್ಕವರು ಸಹ ಚಿತ್ರೀಕರಣದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಈ ಮಧ್ಯೆ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಚಿತ್ರೀಕರಣ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಅವರು ಏನಿಲ್ಲವೆಂದರೂ ಒಂದೂವರೆ ಚಿತ್ರಗಳನ್ನು ಮುಗಿಸುತ್ತಿದ್ದರು. ಆದರೆ, ಲಾಕ್ಡೌನ್ನಿಂದಾಗಿ ಅಕ್ಷಯ್ ಕುಮಾರ್ ಮನೆಯಲ್ಲೇ ಕೂರುವಂತಾಯಿತು. ಇದೀಗ ಅವರು 'ಬೆಲ್ ಬಾಟಮ್' ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಮುಂದಿನ ವಾರದಿಂದ ಸ್ಕಾಟ್ಲ್ಯಾಂಡ್ನಲ್ಲಿ 'ಬೆಲ್ ಬಾಟಮ್' ಚಿತ್ರೀಕರಣ ಶುರುವಾಗಲಿದ್ದು, ಅಕ್ಷಯ್ ಕುಮಾರ್ ಸದ್ಯದಲ್ಲೇ ಸ್ಕಾಟ್ಲ್ಯಾಂಡ್ಗೆ ಹಾರಲಿದ್ದಾರಂತೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನಾನ್ಯಾವತ್ತೂ ಇಷ್ಟು ದಿನಗಳ ಹೀಗೆ ಕೂತಿದ್ದೇ ಇಲ್ಲ. ಆದರೆ, ಇನ್ನು ಎಷ್ಟು ದಿನಾಂತ ಹೆದರಿಕೊಂಡು ಮೆನಯಲ್ಲೇ ಕೂರೋದು. ಕರೊನಾ ಶುರುವಾದಾಗ, ನಮಗೆ ಅದರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಈಗ ಸಾಕಷ್ಟು ವಿಷಯಗಳು ಗೊತ್ತಾಗಿವೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬದುಕಬೇಕೆಂದು ಅಭ್ಯಾಸವಾಗಿದೆ. ಅದರಂತೆ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡೇ ಚಿತ್ರೀಕರಣ ಮಾಡುತ್ತಿದ್ದೇವೆ' ಎಂದು ಅವರು ಹೇಳಿದ್ದಾರೆ.
ಇನ್ನು ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಸಖತ್ ಎಕ್ಸೈಟ್ ಆಗಿರುವ ಅವರು, 'ಕೆಲಸಕ್ಕೆ ಹೋಗಬೇಕು ಎಂದು ತುದಿಗಾಲಲ್ಲಿ ನಿಂತಿದ್ದೇನೆ. ಆದರೆ, ಅನುಮತಿ ಇರಲಿಲ್ಲ. ಈಗ ಅನುಮತಿಯೂ ಸಿಕ್ಕಿತು. ಬಹಳ ದಿನಗಳ ನಂತರ ಕ್ಯಾಮೆರಾ ಎದುರಿಸುತ್ತಿರುವುದರಿಂದ, ಸಖತ್ ಎಕ್ಸೈಟ್ಮೆಂಟ್ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.
ಮೊದಲು 'ಬೆಲ್ ಬಾಟಮ್' ಚಿತ್ರವನ್ನು ಮುಗಿಸುವುದಕ್ಕೆ ಅಕ್ಷಯ್ ಯೋಚಿಸುತ್ತಿದ್ದಾರೆ. ಆ ಚಿತ್ರ ಮುಗಿಸಿದ ನಂತರ ಅವರು ಆನಂದ್ ರೈ ನಿರ್ದೇಶನದ 'ಸತರಂಗಿ ರೇ' ಚಿತ್ರೀಕರಣ ಮುಗಿಸಿ, ಈ ವರ್ಷದ ಕೊನೆಯಲ್ಲಿ 'ಪೃಥ್ವಿರಾಜ್' ಚಿತ್ರಕ್ಕೆ ಬಾಕಿ ಇರುವ ಭಾಗದ ಚಿತ್ರೀಕರಣವನ್ನು ಮುಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.