ಬೆಂಗಳೂರು: ಚಿರು ಕಣ್ಮರೆಯಿಂದ ಸರ್ಜಾ ಕುಟುಂಬದಲ್ಲಿ ಹಸಿಯಾಗಿಯೇ ಉಳಿದಿದ್ದ ನೋವು, ಜೂ. ಚಿರು ಆಗಮನದಿಂದ ಕೊಂಚ ಕಡಿಮೆ ಆಗಿದೆ. ಆ ಪುಟಾಣಿಯಲ್ಲಿಯೇ ಚಿರುವನ್ನು ನೋಡಿದೆ ಇಡೀ ಕುಟುಂಬ. ಇತ್ತ ಮೊಮ್ಮಗನ ಆಗಮನದಿಂದ ಸುಂದರ್ ರಾಜ್ ಕುಟುಂಬದಲ್ಲಿಯೂ ನಗು ಉಕ್ಕಿದೆ.
‘ಮೊಮ್ಮಗ ಬಂದಿದ್ದು ಸಮುದ್ರಮಂಥನ ಆಗಿ ಕ್ಷೀರ ಸಾಗರದಿಂದ ಅಮೃತ ಸಿಕ್ಕಂತಾಗಿದೆ’ ಎಂದು ಹೇಳಿದ್ದಾರೆ. ‘ಮೊಮ್ಮಗನನ್ನು ಗೋಧೂಳಿ ಲಗ್ನದಂದು ಮನೆಗೆ ತುಂಬಿಸಿಕೊಂಡಿದ್ದೇವೆ. ಸಹಜವಾಗಿ ಗೋಧೂಳಿ ಮತ್ತು ಬ್ರಾಹ್ಮಿ ಮುಹೂರ್ತದಲ್ಲಿ ಈ ಕಾರ್ಯ ನಡೆಯಬೇಕು. ಹಾಗಾಗಿ ಸಂಜೆ ಗೋಧೂಳಿ ಲಗ್ನದಲ್ಲಿ ಮೊಮ್ಮಗ ಮನೆ ಪ್ರವೇಶಿಸಿದ್ದಾನೆ. ನಾನು ಈಗಾಗಲೇ ಹೋಗಿದ್ದೀನಿ, ಯೋಚನೆ ಮಾಡಬೇಡಿ, ಕರುವಾಗಿ ನಾನು ಮತ್ತೆ ಬಂದಿದ್ದೇನೆ ಎಂಬರ್ಥದಲ್ಲಿ ಚಿರು ಮಗನನ್ನು ಮನೆ ತುಂಬಿಸಿಕೊಂಡಿದ್ದೇವೆ’ ಎಂದು ಚಿರು ಪುತ್ರನನ್ನು ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಮನೆ ತುಂಬಿಸಿಕೊಂಡಿದ್ದಾರೆ.
ಸದ್ಯ ಜೂ. ಚಿರು, ಚಿಂಟೂ ಹೆಸರಿನಿಂದ ಕರೆಸಿಕೊಳ್ಳುವ ಪುಟಾಣಿಗೆ ಮೂರು ತಿಂಗಳ ಬಳಿಕ ನಾಮಕರಣ ಶಾಸ್ತ್ರ ನೆರವೇರಲಿದೆ. ‘ಈ ಮಗು ಸರ್ಜಾ ಕುಟುಂಬದ ಕುಡಿ. ಎರಡೂ ಮನೆಗಳಲ್ಲಿ ಪುಟಾಣಿ ಬೆಳೆಯಲಿದೆ. ಕಲಾವಿದರ ಕುಟುಂಬದಲ್ಲಿ ಜನಿಸಿರುವುದಿಂದ ಮುಂದೆ ಕಲಾವಿದ ಆದರೂ ಆಗಬಹುದು. ಅರ್ಜುನ್ ಸರ್ಜಾ ಅವರೇ ಲಾಂಚ್ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಎಲ್ಲವೂ ಒಳ್ಳೆಯದೇ ಆಗಲಿ’ ಎಂದಿದ್ದಾರೆ.