ಸಿನಿವಾಣಿ

ಈ ಬಾರಿ ಯಾವ ಕಥೆ ಹೇಳಲು ಹೊರಟಿದ್ದಾರೆ ವಿವೇಕ್​ ಅಗ್ನಿಹೋತ್ರಿ?

ಮುಂಬೈ: "ದಿ ಕಾಶ್ಮೀರ್​ ಫೈಲ್ಸ್​' ನಂತರ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಮುಂದೇನು ಮಾಡಬಹುದು ಎಂಬ ಪ್ರಶ್ನೆ ಮತ್ತು ಕುತೂಹಲ ಎಲ್ಲರಲ್ಲೂ ಇತ್ತು. ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿಯವರ ನಿಗೂಢ ಸಾವಿನ ಸುತ್ತ ಅವರು ಮಾಡಿದ ಚಿತ್ರ "ತಾಶ್ಕೆಂಟ್​ ಫೈಲ್ಸ್​' ಸಾಕಷ್ಟು ಸುದ್ದಿ ಮಾಡಿತು. ನಂತರ "ದಿ ಕಾಶ್ಮೀರ್​ ಫೈಲ್ಸ್​' ಸೂಪರ್​ ಹಿಟ್​ ಆಗುವುದರ ಜತೆಗೆ ಜಗತ್ತಿನಾದ್ಯಂತ 250 ಕೋಟಿ ರೂ. ಸಂಪಾದಿಸಿತು. ಈ ಹಿನ್ನೆಲೆಯಲ್ಲಿ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಿಗೂ ಸಹಜವಾಗಿಯೇ ಇತ್ತು.

ಆ ಕುತೂಹಲಕ್ಕೆ ಈಗ ಕೊನೆಗೂ ತೆರೆ ಬಿದ್ದಿದೆ. "ದಿ ಕಾಶ್ಮೀರ್​ ಫೈಲ್ಸ್​' ಚಿತ್ರಕ್ಕೆ ಜನ ತೋರಿದ ಪ್ರೀತಿ ಮತ್ತು ನೀಡಿರುವ ಪ್ರೋತ್ಸಾಹಕ್ಕೆ ಧನ್ಯವಾದ ತಳಿಸಿರುವ ಅವರು, ಮುಂದಿನ ಚಿತ್ರದ ಕೆಲಸ ಶುರು ಮಾಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮುಂದಿನ ಚಿತ್ರ "ದಿ ಡೆಲ್ಲಿ ಫೈಲ್ಸ್​' ಆಗಲಿದೆ ಎಂಬ ಸೂಚನೆಯನ್ನೂ ನೀಡಿದ್ದಾರೆ.

"ದಿ ಡೆಲ್ಲಿ ಫೈಲ್ಸ್​' ಚಿತ್ರದ ಕಥೆಯೇನು? ಈ ಬಾರಿ ವಿವೇಕ್​ ಏನು ಹೇಳಲು ಹೊರಟಿದ್ದಾರೆ? ಎಂಬ ಪ್ರಶ್ನೆ ಸಹಜವೇ. ಆದರೆ, ಈ ರಹಸ್ಯವನ್ನು ವಿವೇಕ್​ ಬಿಟ್ಟುಕೊಟ್ಟಿಲ್ಲ. 1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್​ ಧಂಗೆಯ ಕುರಿತಾಗಿ ಚಿತ್ರ ಮೂಡಿಬರಲಿದೆ ಎಂಬ ಮಾತು ಗಟ್ಟಿಯಾಗಿ ಕೇಳಿ ಬರುತ್ತಿದೆ. ನಿಜಕ್ಕೂ ಚಿತ್ರದಲ್ಲಿ ಏನಿರುತ್ತದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.