ಬೆಂಗಳೂರು: ‘ರಾಜಾಹುಲಿ’ ಹಿಟ್ ಆಯ್ತು.. ‘ಪಡ್ಡೆಹುಲಿ’ ಬಂದೋಯ್ತು.. ಈಗ ‘ಗಂಡುಲಿ’ ಸರದಿ. ಈ ಹಿಂದೆ ‘ಇಂಜಿನಿಯರ್ಸ್’ ಚಿತ್ರಕ್ಕೆ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದ ವಿನಯ್ ರತ್ನ ಸಿದ್ಧಿ, ‘ಗಂಡುಲಿ’ ಆಗಿದ್ದಾರೆ.
ಕಾಲೇಜು ಹುಡುಗರ ತವಕ ತಲ್ಲಣಗಳನ್ನು ಈ ಬಾರಿ ಬದಿಗಿಟ್ಟು, ಹಳ್ಳಿ ಸೊಗಡುಳ್ಳ ಸಿನಿಮಾ ಮಾಡಿದ್ದಾರೆ. ಇಲ್ಲಿಯೂ ಅವರೇ ನಾಯಕ, ಅವರೇ ನಿರ್ದೇಶಕ. ಅಂದಹಾಗೆ, ‘ಗಂಡುಲಿ’ ಚಿತ್ರದಲ್ಲಿ ದಿವಾನ್ ಕುಟುಂಬದ ಹುಡುಗನಾಗಿ ವಿನಯ್ ಕಾಣಿಸಿಕೊಂಡಿದ್ದಾರೆ. ದಾನ ಧರ್ಮ ಮಾಡುವುದರಲ್ಲಿ ಸದಾ ಮುಂದಿದ್ದ ದಿವಾನ್ ಕುಟುಂಬ ಒಂದು ದಿನ ಎಲ್ಲವನ್ನೂ ಕಳೆದುಕೊಳ್ಳುತ್ತದೆ. ಅಂಥ ಊರಲ್ಲಿ ತಾಯಿ-ಮಗ ಹೇಗೆ ಬದುಕುತ್ತಾರೆ ಎಂಬುದೇ ‘ಗಂಡುಲಿ’ ತಿರುಳು.
ವಿ.ಆರ್.ಫಿಲಂ ಲಾಂಛನದಲ್ಲಿ ಅಮರೇಂದ್ರ ಚಂದನ್ ಹಾಗೂ ಕೆ.ಎಂ.ಪುನೀತ್ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಹಿರಿಯ ನಟಿ ಸುಧಾ ನರಸಿಂಹರಾಜು ನಾಯಕನ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ನಾಯಕಿಯಾಗಿ ಛಾಯಾದೇವಿ ವಿನಯ್ಗೆ ಜೋಡಿ. ಇನ್ನುಳಿದಂತೆ ಧರ್ವೇಂದ್ರ ಅರಸ್, ಸುಬ್ಬೇಗೌಡ್ರು, ರಾಮಣ್ಣ, ರಂಜಿತ್, ಪುನೀತ್ ಮುಂತಾದವರು ಅಭಿನಯಿಸಿದ್ದಾರೆ. ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿ ಮಾಧ್ಯಮದ ಮುಂದೆ ಬಂದಿದ್ದ ಚಿತ್ರತಂಡ, ಸಿನಿಮಾ ಬಗ್ಗೆ ಮಾಹಿತಿ ನೀಡಿ ಸಂಭ್ರಮಿಸಿತು. ರವಿದೇವ್ ಸಂಗೀತ, ರಾಜು ಶಿವಶಂಕರ್ ಮತ್ತು ಶ್ಯಾಮ್ ಛಾಯಾ ಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಸುರೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ.