ಆರು ವೆಬ್‌ಸರಣಿಗಳು, 10 ಧಾರಾವಾಹಿಗಳು ಸೇರಿ 15ಕ್ಕೂ ಅಧಿಕ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿರುವ ಖ್ಯಾತ ನಟ ವಿಕ್ರಾಂತ್ ಮಸ್ಸೆಗೆ ಸಲ್ಲುತ್ತದೆ. ಹೀಗೆ ಮೂರೂ ಮಾಧ್ಯಮಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ವಿಕ್ರಾಂತ್ ಇದೀಗ, ವಿಧು ವಿನೋದ್ ಚೋಪ್ರಾ ನಿರ್ದೇಶನದ ಪ್ಯಾನ್ ಇಂಡಿಯಾ ‘12 ಫೇಲ್’ ಚಿತ್ರದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮೂಡಿಬಂದಿರುವ ಈ ಸಿನಿಮಾ ಇದೇ ಶುಕ್ರವಾರ (ಅ. 27) ಕನ್ನಡದಲ್ಲೂ ಬಿಡುಗಡೆಯಾಗುತ್ತಿದ್ದು, ಅದೇ ಖುಷಿಯಲ್ಲಿ ವಿಕ್ರಾಂತ್ ವಿಜಯವಾಣಿ ಜತೆ ಮಾತನಾಡಿದ್ದಾರೆ.
- ‘12 ಫೇಲ್’ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ?
- ವಿಧು ವಿನೋದ್ ಚೋಪ್ರಾ ಅವರ ಕಂಪನಿಯಿಂದ, ಸರ್ ನಿಮ್ಮನ್ನು ಭೇಟಿಯಾಗಬೇಕು ಅಂತಿದ್ದಾರೆ, ವಜೀರಾಬಾದ್‌ನಲ್ಲಿರುವ ಅವರ ಾರ್ಮ್‌ಹೌಸ್‌ಗೆ ಬರಬೇಕು ಅಂತ ಕರೆ ಬಂತು. ಅಲ್ಲಿಗೆ ಹೋದಾಗ ವಿಧು ಸರ್ ಒಂದು ಬುಕ್ ಕೊಟ್ಟು, ಓದಲು ತಿಳಿಸಿದರು. ಒಂದೇ ದಿನದಲ್ಲಿ ಪುಸ್ತಕ ಓದಿ ಮುಗಿಸಿದೆ. ‘ಪಿಕೆ’, ‘ಸಂಜು’, ‘3 ಈಡಿಯಟ್ಸ್’ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸರ್ ನನ್ನನ್ನು ಶಿಾರಸು ಮಾಡಿದ್ದರು ಅಂತ ನಂತರ ತಿಳಿಯಿತು.
- ಇದು ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಅವರ ಜೀವನಾಧಾರಿತ ಚಿತ್ರ. ಅವರನ್ನು ಭೇಟಿಯಾದಿರಾ?
- ಮನೋಜ್ ಕುಮಾರ್ ಶರ್ಮಾ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ತಾಸುಗಟ್ಟಲೆ ಮಾತನಾಡಿದ್ದೇವೆ. ಹೀಗಾಗಿಯೇ ನನಗೆ ಅವರ ಜೀವನದ ಬಗ್ಗೆ ಪುಸ್ತಕ ಹಾಗೂ ಸ್ಕ್ರಿಪ್ಟ್‌ನಲ್ಲಿ ಇರದ ಹಲವು ವಿಷಯಗಳು ತಿಳಿಯಿತು. ಅವರ ಮೂಲಕ ನನಗೆ ಒಬ್ಬ ಅಣ್ಣ ಸಿಕ್ಕಿದ್ದಾನೆ. ಮನೋಜ್ ಸರ್ ಮಾತ್ರವಲ್ಲ ಹಲವಾರು ಮಂದಿ ಸಿವಿಲ್ ಸರ್ವೆಂಟ್ಸ್ ಜತೆ ಸಮಯ ಕಳೆದೆ.
- ಪಾತ್ರಕ್ಕೆ ಯಾವ ರೀತಿಯ ಸಿದ್ದತೆ ಬೇಕಾಯಿತು?
- ಚಂಬಲ್ ಕಣಿವೆಯಲ್ಲಿ ಬೆಳೆದ ಯುವಕನ ಪಾತ್ರ ನನ್ನದು. ಸಾಕಷ್ಟು ಟ್ಯಾನ್ ಆಗಬೇಕಾಯಿತು. ತೂಕ ಕಳೆದುಕೊಳ್ಳಬೇಕಾಯಿತು. ಅಲ್ಲಿನ ಭಾಷೆ, ಉಚ್ಛಾರಣೆ ಕಲಿತೆ. ಹೀಗೆ ಸಾಕಷ್ಟು ತಯಾರಿ ಬೇಕಾಯಿತು.
- ವಿಧು ವಿನೋದ್ ಚೋಪ್ರಾ ಜತೆ ಕೆಲಸ ಮಾಡಿದ ಅನುಭವ…
- ವಿಧು ಸರ್ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ. ನಮ್ಮಲ್ಲಿನ ಅತ್ಯುತ್ತಮ ಪ್ರತಿಭೆಯನ್ನು ಹೊರತರುತ್ತಾರೆ. ಅವರ ಜತೆ ಕೆಲಸ ಮಾಡಿದ್ದು ಅದ್ಭುತ ಅನುಭವ ನೀಡಿತು. ಉತ್ತಮ ನಿರ್ದೇಶಕ ಮಾತ್ರವಲ್ಲ, ಉತ್ತಮ ವ್ಯಕ್ತಿ ಕೂಡ. ಜೀವನದಾದ್ಯಂತ ನೆನಪಿನಲ್ಲಿ ಉಳಿಯಲಿದೆ. ಅವರು ಪ್ರಪಂಚವನ್ನು ನೋಡುವ ದೃಷ್ಟಿಕೋನವೇ ವಿಭಿನ್ನ.
- ಸಿನಿಮಾ, ವೆಬ್‌ಸರಣಿ, ಧಾರಾವಾಹಿ… ಹೀಗೆ ಎಲ್ಲ ಪ್ರಕಾರಗಳಲ್ಲೂ ನಟಿಸಿದ್ದೀರಿ. ಯಾವುದು ಹೆಚ್ಚು ಚಾಲೆಂಜಿಂಗ್?
- ಪ್ರತಿ ಮಾಧ್ಯಮವೂ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಮೂರು ಮಾಧ್ಯಮಗಳೂ ಒಬ್ಬ ಕಲಾವಿದನ ಬಳಿ ಮೂರು ವಿಭಿನ್ನ ವಿಷಯಗಳನ್ನು ಬಯಸುತ್ತವೆ. ಕೆಲವೊಮ್ಮೆ ಟಿವಿ ಧಾರಾವಾಹಿಗಳಲ್ಲಿ ನಟಿಸಲು ಹೆದರಿಕೆ ಉಂಟಾಗುತ್ತದೆ. ಪ್ರತಿದಿನ 20 ನಿಮಿಷದ ಸಂಚಿಕೆಯಂತೆ, ವಾರದ ಐದು ದಿನಗಳಲ್ಲಿ 100 ನಿಮಿಷ ಕಂಟೆಂಟ್ ಕೊಡಬೇಕು. ಆ ಲೆಕ್ಕದಲ್ಲಿ ವಾರಕ್ಕೊಂದು ಸಿನಿಮಾ ಶೂಟಿಂಗ್ ಮಾಡಿದಂತಾಗುತ್ತದೆ. ಆದರೆ, ನಾನು ಅದೃಷ್ಟವಂತ. ಒಬ್ಬ ಕಲಾವಿದನಾಗಿ ಏನೆಲ್ಲ ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದೇನೆ.
- ಗರ್ಲ್‌ಫ್ರೆಂಡ್ ಚಾಲೆಂಜ್ ಒಪ್ಪಿ ಮನೋಜ್ ಐಪಿಎಸ್ ಪಾಸ್ ಆದರಂತೆ. ನಿಮ್ಮದೂ ಲವ್ ಮ್ಯಾರೇಜ್ ಆಗಿರುವ ಕಾರಣ, ಆ ರೀತಿ ಚಾಲೆಂಜ್ ಏನಾದರೂ…?
- ನಾನು ಇವತ್ತು ಏನೇ ಆಗಿದ್ದರೂ ಅದಕ್ಕೆ ಆಕೆಯೇ ಕಾರಣ. 10 ವರ್ಷಗಳಿಂದ ಆಕೆಯ ಜತೆಗಿದ್ದೇನೆ. ನನ್ನ ಯಶಸ್ಸಿನ ಬೆನ್ನೆಲುಬು. ವೃತ್ತಿ ಜೀವನದ, ಖಾಸಗಿ ಜೀವನದ ಅತ್ಯಂತ ಕಠಿಣ ವಿಮರ್ಶಕಿ. ಅತ್ಯುತ್ತಮ ಮಾರ್ಗದರ್ಶಕಿ.