ಸಿನಿವಾಣಿ

ಓವರ್​ಸೀಸ್​ ಹಕ್ಕುಗಳು 10 ಕೋಟಿಗೆ ಸೇಲ್: "ವಿಕ್ರಾಂತ್​ ರೋಣ'ನ ಹೊಸ ದಾಖಲೆ

ಬೆಂಗಳೂರು: ಸುದೀಪ್​ ಅಭಿನಯದ "ವಿಕ್ರಾಂತ್​ ರೋಣ' ಚಿತ್ರವು ಜುಲೈ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರದ ಅಂತಾರಾಷ್ಟ್ರೀಯ ವಿತರಣೆಯ ಹಕ್ಕುಗಳು 10 ಕೋಟಿ ರೂ.ಗಳಿಗೆ ಮಾರಾಟವಾಗಿದೆ ಎಂಬ ಸುದ್ದಿಯೊಂದು ಬಂದಿದೆ.

"ವಿಕ್ರಾಂತ್​ ರೋಣ' ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಭಾರತವಲ್ಲದೆ ಬೇರೆ ದೇಶಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದ ಓವರ್​ಸೀಸ್​ (ಸಾಗರೋತ್ತರ) ಹಕ್ಕುಗಳನ್ನು ಒನ್​ ಟ್ವೆಂಟಿ 8 ಮೀಡಿಯಾ ಎಂಬ ಸಂಸ್ಥೆಯು ಪಡೆದುಕೊಂಡಿದೆ. ಎಷ್ಟು ಮೊತ್ತಕ್ಕೆ ವ್ಯಾಪಾರ ನಡೆದಿದೆ ಎಂಬ ವಿಷಯವನ್ನು ನಿರ್ಮಾಪಕರಾಗಲೀ ಅಥವಾ ಒನ್​ ಟ್ವೆಂಟಿ 8 ಮೀಡಿಯಾ ಮೀಡಿಯಾದವರು ಹೇಳದಿದ್ದರೂ, 1.3 ಮಿಲಿಯನ್​ ಡಾಲರ್​ಗೆ (10 ಕೋಟಿ ರೂ.) ಮಾರಾಟವಾಗಿದೆ ಎಂದು ಮೂಲಗಳು ತಿಳಿಸುತ್ತವೆ.

ಈ ವ್ಯವಹಾರವು ಕನ್ನಡ ಚಿತ್ರಕ್ಕೆ ಬಹಳ ದೊಡ್ಡದು ಮತ್ತು ದಕ್ಷಿಣ ಭಾರತದ ಇತರೆ ಭಾಷೆಗಳಿಗೆ ಸಮನಾಗಿದೆ ಎಂದು ನಿರ್ಮಾಪಕ ಜಾಕ್​ ಮಂಜು ಹೇಳಿಕೊಂಡಿದ್ದಾರೆ. "ವಿಕ್ರಾಂತ್​ ರೋಣ' ಚಿತ್ರದಲ್ಲಿ ಸುದೀಪ್​ ಜತೆಗೆ ಜಾಕ್​ಲೀನ್​ ರ್ನಾಂಡಿಸ್​, ನಿರೂಪ್​ ಭಂಡಾರಿ, ನೀತಾ ಅಶೋಕ್​, ರವಿಶಂಕರ್​ ಗೌಡ ಮುಂತಾದವರು ನಟಿಸಿದ್ದು, ಅನೂಪ್​ ಭಂಡಾರಿ ಕಥೆ&ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಜನೀಶ್​ ಲೋಕನಾಥ್​ ಸಂಗೀತ ಮತ್ತು ವಿಲಿಯಂ ಡೇವಿಡ್​ ಛಾಯಾಗ್ರಹಣವಿರುವ "ವಿಕ್ರಾಂತ್​ ರೋಣ'ದ ಪ್ರಚಾರ ಕೆಲಸಗಳು ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ.