ಸಿನಿವಾಣಿ

ವಿಕ್ರಾಂತ್ ರೋಣ ದುಬೈ ಪ್ರೀಮಿಯರ್; 6 ಭಾಷೆಗಳಲ್ಲಿ ಏಕಕಾಲಕ್ಕೆ ಪ್ರದರ್ಶನ

Webdesk - Ravikanth

ಬೆಂಗಳೂರು: ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಜುಲೈ 28ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಪ್ರಚಾರದದಲ್ಲಿ ಸುದೀಪ್ ಮತ್ತು ಚಿತ್ರತಂಡದವರು ತೊಡಗಿಸಿಕೊಂಡಿದ್ದಾರೆ. 13 ವರ್ಷಗಳ ನಂತರ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿರುವ ಸುದೀಪ್, ಅಲ್ಲಿ ತಮ್ಮ ತಂಡದೊಂದಿಗೆ ಚಿತ್ರದ ಪ್ರಚಾರ ಮಾಡಿದ್ದಾರೆ. ಸುದೀಪ್ ಜತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್, ನಿರ್ದೇಶಕ ಅನೂಪ್ ಭಂಡಾರಿ ಮುಂತಾದವರು ಮಾಧ್ಯಮದವರ ಜತೆಗೆ ಚಿತ್ರದ ಕುರಿತು ಮಾತನಾಡಿದ್ದಾರೆ.

ದೆಹಲಿಯಲ್ಲಿ ಪ್ರಚಾರ ಮುಗಿಸಿರುವ ಚಿತ್ರತಂಡ ಸೋಮವಾರ ಮತ್ತು ಮಂಗಳವಾರ ಚೆನ್ನೈನಲ್ಲಿ, ಬುಧವಾರ ಕೊಚ್ಚಿಯಲ್ಲಿ, ಗುರುವಾರದಿಂದ ನಾಲ್ಕು ದಿನಗಳ ಕಾಲ ಹೈದರಾಬಾದ್​ನಲ್ಲಿ ಚಿತ್ರದ ಪ್ರಚಾರ ಮಾಡಲಿದ್ದಾರೆ. ಇನ್ನು, ಜುಲೈ 27ರ ರಾತ್ರಿ ದುಬೈನಲ್ಲಿ ಚಿತ್ರದ ಪ್ರೀಮಿಯರ್ ನಡೆಯಲಿದೆ. ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು ಸೇರಿದಂತೆ ‘ವಿಕ್ರಾಂತ್ ರೋಣ’ ಚಿತ್ರದ ಆರು ಅವತರಣಿಕೆಗಳ ಪ್ರೀಮಿಯರ್ ಅಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸುದೀಪ್ ಮತ್ತು ಚಿತ್ರತಂಡದವರು ಹಾಜರಿರಲಿದ್ದಾರೆ. ದುಬೈ ಅಲ್ಲದೆ, ಅಮೆರಿಕಾದಲ್ಲೂ ಚಿತ್ರದ ಪ್ರೀಮಿಯರ್ ನಡೆಯಲಿದೆ.

ದೆಹಲಿಯಲ್ಲಿ ಜೋಷಿ ಭೇಟಿ

ಈ ಮಧ್ಯೆ, ಶನಿವಾರ ಬೆಳಿಗ್ಗೆ ಸುದೀಪ್ ಅವರನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಉಪಾಹಾರಕ್ಕೆ ಆಹ್ವಾನಿಸಿದ್ದರು. ಜೋಷಿ ಅವರ ನಿವಾಸಕ್ಕೆ ಭೇಟಿ ನೀಡಿದ ಸುದೀಪ್, ಅವರೊಂದಿಗೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಅವರು, ‘ಇಂದು ದೆಹಲಿಯ ನನ್ನ ನಿವಾಸಕ್ಕೆ ಖ್ಯಾತ ಚಿತ್ರನಟ ಸುದೀಪ್ ಭೇಟಿ ನೀಡಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. 13 ವರ್ಷಗಳ ನಂತರ ದೆಹಲಿಗೆ ಭೇಟಿ ನೀಡುತ್ತಿರುವ ಸುದೀಪ್ ಅವರು, ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಚಟುವಟಿಕೆಗಳ ಬಗ್ಗೆ ರ್ಚಚಿಸಿದರು’ ಎಂದು ಪ್ರಹ್ಲಾದ್ ಜೋಷಿ ಟ್ವೀಟ್ ಮಾಡಿದ್ದಾರೆ.