ಸಿನಿವಾಣಿ

ಕನ್ನಡಕ್ಕೆ ಬಂದ ರಾಜಸ್ಥಾನದ ಹುಡುಗಿ; "ಐ ಯಾಮ್​ ಗಾಡ್​'ನಲ್ಲಿ ವಿಜೇತಾ ಪಾರೀಕ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಯಾಮಿ ಗೌತಮ್​, ರಾಕುಲ್​ ಪ್ರೀತ್​ ಸಿಂಗ್​, ನಿತ್ಯಾ ಮೆನನ್​ ಸೇರಿ ಕನ್ನಡದ ಮೂಲಕ ಕರಿಯರ್​ ಪ್ರಾರಂಭಿಸಿದ ಹಲವು ಪರಭಾಷೆಯ, ಹೊರ ರಾಜ್ಯದ ನಟಿಯರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ರಾಜಸ್ಥಾನದ ಹುಡುಗಿ ವಿಜೇತಾ ಪಾರೀಕ್​ ನಾಳೆ ತೆರೆಗೆ ಬರಲಿರುವ "ಧ್ವಜ' ಖ್ಯಾತಿಯ ರವಿ ಗೌಡ ನಟಿಸಿ, ನಿರ್ದೇಶಿಸಿರುವ "ಐ ಯಾಮ್​ ಗಾಡ್​' ಮೂಲಕ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಚಿತ್ರದ ಬಗ್ಗೆ ವಿಜೇತಾ, "ರವಿ ಸರ್​ ನಾಯಕಿಯ ಹುಡುಕಾಟ ನಡೆಸುತ್ತಿರುವ ವಿಷಯ ಗೊತ್ತಾಗಿ ಆನ್​ಲೈನ್​ ಆಡಿಷನ್​ ಕೊಟ್ಟು ಚಿತ್ರಕ್ಕೆ ಆಯ್ಕೆಯಾದೆ. ನಾನು ಫೈಟರ್​ ಪೈಲಟ್​ ಆಗುವ ಕನಸು ಕಂಡವಳು. ಆದರೆ, ಬಿದ್ದು ಪೆಟ್ಟಾದ ಕಾರಣ, ಆ ಕನಸು ಬಿಡಬೇಕಾಯಿತು. ಕ್ರಮೇಣ ಕೆಲ ಮಾಡೆಲಿಂಗ್​ ಶೋಗಳನ್ನು ನೀಡತೊಡಗಿದೆ. ಆ ಮೂಲಕ ಚಿತ್ರರಂಗಕ್ಕೆ ಅದರಲ್ಲೂ ಕನ್ನಡದ ಮೂಲಕ ಸಿನಿಮಾ ಕರಿಯರ್​ ಪ್ರಾರಂಭಿಸಿದ್ದು ಖುಷಿ ನೀಡಿದೆ. "ಐ ಯಾಮ್​ ಗಾಡ್​'ನಲ್ಲಿ ನಾನು ಬಿಂದು ಎಂಬ ಪಾತ್ರದಲ್ಲಿ ನಟಿಸಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.

ಮೊದಲ ದಿನವೇ ಜಲಪಾತದ ತುದಿಯಲ್ಲಿ ನಿಂತಿದ್ದೆ!

ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡ ಬಗ್ಗೆ ವಿಜೇತಾ, "ಚಿತ್ರತಂಡದ ಜತೆ ನಿರಂತರ ಸಂಪರ್ಕದಲ್ಲಿದ್ದೆ. ನನ್ನ ಪಾತ್ರಕ್ಕಾಗಿ ದಣ ಭಾರತದ ಬೇರೆ ಬೇರೆ ಭಾಷೆಗಳ ಕೆಲ ಸಿನಿಮಾಗಳನ್ನು ವೀಸಲು ರವಿ ಸರ್​ ಹೇಳಿದ್ದರು. ಎಲ್ಲವನ್ನೂ ಸರಾಸರಿ 10 ಬಾರಿ ನೋಡಿದೆ. ನನ್ನ ಪಾತ್ರ ಹೀಗಿರಬೇಕು, ಬಾಡಿ ಲಾಂಗ್ವೇಜ್​ ಹಾಗಿರಬೇಕು ಎಂದು ಹೇಳುತ್ತಿದ್ದರು. ಬಳಿಕ ನನ್ನದೇ ರೀತಿಯಲ್ಲಿ ನಾನು ಸಿದ್ಧತೆ ಮಾಡಿಕೊಂಡೆ. ನಾನು ಚಿತ್ರತಂಡ ಸೇರಿಕೊಂಡ ಮೊದಲ ದಿನವೇ ಕೇರಳದ ಜಲಪಾತದ ತುದಿಯಲ್ಲಿ ನಿಂತು ಶೂಟಿಂಗ್​ ಮಾಡಬೇಕಾಯಿತು. ಭಯದಲ್ಲೇ ಭಾವನಾತ್ಮಕ ಸನ್ನಿವೇಶದಲ್ಲಿ ನಟಿಸಿದೆ. ಆ ಸಮಯದಲ್ಲಿ ನಾನಿಲ್ಲೇನು ಮಾಡುತ್ತಿದ್ದೇನೆ ಅಂತ ಅನ್ನಿಸಿದ್ದೂ ಇದೆ' ಎಂದು ಅನುಭವ ಹಂಚಿಕೊಳ್ಳುತ್ತಾರೆ.

ನಾನೂ ನಿಮ್ಮವಳೇ...

ಕನ್ನಡದ ಮೂಲಕ ಕರಿಯರ್​ ಪ್ರಾರಂಭಿಸಿರುವ ವಿಜೇತಾ, ಅದರ ಬೆನ್ನಲ್ಲೇ ಒಂದು ತೆಲುಗು ಚಿತ್ರದ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. ಹಾಗೇ ಬಾಲಿವುಡ್​ ಡೆಬ್ಯೂಗೆ ಎದುರು ನೋಡುತ್ತಿರುವ ಅವರು ಬೇರೆ ಭಾಷೆಗಳಲ್ಲೂ ಆಡಿಷನ್​ ನೀಡುತ್ತಿದ್ದಾರೆ. "ಕನ್ನಡ ನನಗೆ ಹೊಸ ಭಾಷೆ. ಈಗ ಭಾಷೆ ಕಲಿಯುತ್ತಿದ್ದೇನೆ. ಚಿತ್ರದಲ್ಲಿ ನನ್ನಿಂದ ಕೆಲ ತಪ್ಪುಗಳಾಗಿರಬಹುದು. ಆದರೆ, ನನ್ನನ್ನು ನಿಮ್ಮವಳೇ ಎಂದುಕೊಂಡು ನಿಮ್ಮ ಹೃದಯದಲ್ಲಿ ಸ್ವಲ್ಪ ಜಾಗ ಕೊಡಿ' ಎಂದು ಮನವಿ ಮಾಡಿಕೊಳ್ಳುತ್ತಾರೆ ವಿಜೇತಾ.