‘ನನ್ನ ಸಿನಿಮಾ ನೋಡುವಾಗ ಯಾರೂ ನಿದ್ರಿಸಬಾರದು.. ನಿದ್ರೆ ಎಂಥದು, ತೂಕಡಿಸಲೂಬಾರದು..’ ಎಂಬುದು ಪ್ರತಿಯೊಬ್ಬ ನಿರ್ದೇಶಕನ ಆಶಯ.
ವಿಲನ್ ಹಾಗೂ ನೆಗೆಟಿವ್ ಶೇಡ್ನ ಪಾತ್ರಗಳು ‘ಎಕ್ಸೆಂಟ್ರಿಕ್’. ಇದು ಕಾಯಿಲೆ ಆಧಾರಿತವಾಗಿ ಹೆಣೆದ ಸಿನಿಮಾವಾದರೂ ಇಲ್ಲಿ ‘ಎಗ್ಸೆಲ್’ ಮಾಫಿಯಾನೇ ಕಥೆಯ ಅಂಡಾಣು. ಇದು ಒಂದು ‘ಮೊಟ್ಟೆ’ಯ ಕೊರತೆಗಾಗಿ ನಡೆಯುವ ಅನಾಚಾರಗಳ ಕಥೆ-ವ್ಯಥೆ. ಅಂಡಾಣು ಕೊರತೆಯಿಂದಾಗಿ ಮಕ್ಕಳಾಗದ ಸಮಸ್ಯೆ ಎದುರಿಸುವವರಿಗೆ, ಹದಿಹರೆಯದ ಹೆಣ್ಣುಮಕ್ಕಳನ್ನು ಅಪಹರಿಸಿ ಅವರಿಂದ ಅಂಡಾಣುಗಳನ್ನ ಪಡೆದು ಮಗು ಜನಿಸುವಂತೆ ಮಾಡುವ ದಂಧೆಯೇ ಇಲ್ಲಿನ ಕಥೆಯ ಕೇಂದ್ರ ಬಿಂದು.
ಕುಂಭಕರ್ಣನಾಗಿಯೂ, ಆ ಸಮಸ್ಯೆಯಿಂದ ಹೊರಬರಲು ಯತ್ನಿಸುವ ಜಂಟಲ್ವುನ್ ಆಗಿಯೂ ಪ್ರಜ್ವಲ್ ದೇವರಾಜ್ ಅಭಿನಯ ಇಲ್ಲಿ ಮೆಚ್ಚುಗೆ ಗಳಿಸುತ್ತದೆ. ಈ ಚಿತ್ರದಿಂದ ಅವರ ವೃತ್ತಿಜೀವನಕ್ಕೆ ಒಂದು ತಿರುವು ಸಿಕ್ಕರೂ ಅಚ್ಚರಿ ಏನಲ್ಲ. ನಾಯಕಿ ನಿಶ್ವಿಕಾ ನಾಯ್ಡು ಇಲ್ಲಿ ತಪಸ್ವಿನಿ ಪಾತ್ರದಲ್ಲಿ ಡ್ಯುಯೆಟ್ಗಿಂತ ಹೆಚ್ಚಾಗಿ ಡಯೆಟ್ನಲ್ಲೇ ಕಾಣಿಸಿಕೊಂಡಿದ್ದರೂ ಇಷ್ಟವಾಗುತ್ತಾರೆ. ಟ್ರಾಫಿಕ್ ಪೊಲೀಸ್ ಆಗಿ ತಬಲಾ ನಾಣಿ ಒಂದೆರಡು ಸನ್ನಿವೇಶಗಳಲ್ಲಷ್ಟೇ ಕಾಣಿಸಿಕೊಂಡರೂ ನಕ್ಕೋ ನಕ್ಕೋ ಎನಿಸುವಷ್ಟು ನಗಿಸಿ ಹೋಗುತ್ತಾರೆ.
ವಿಲನ್ ಅರ್ಜುನ್, ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿರುವ ಸಂಚಾರಿ ವಿಜಯ್ ಮಾತ್ರವಲ್ಲದೆ ಭರತ್ ಕಲ್ಯಾಣ್, ಪ್ರಶಾಂತ್ ಸಿದ್ದಿ ಸೇರಿ ಎಲ್ಲ ಪಾತ್ರಧಾರಿಗಳ ಅಭಿನಯಕ್ಕೆ ಇಲ್ಲಿ ಮೆಚ್ಚುಗೆ ಸಲ್ಲುತ್ತದೆ. ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಾಹಸ ಸಂಯೋಜನೆ ಕೂಡ ಇಲ್ಲಿ ಗಮನ ಸೆಳೆಯುತ್ತದೆ. ಎರಡು ಹಾಡುಗಳು ಇಷ್ಟವಾಗುತ್ತವೆ. ಇಲ್ಲಿ ಕಥಾನಾಯಕನ ಅಣ್ಣನ ಮಗಳು ವರು ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲನಟಿ ಆರಾಧ್ಯಾ ನೆನಪಲ್ಲುಳಿಯುವ ಅಭಿನಯ ನೀಡಿದ್ದಾಳೆ.
ಈ ಹಂತದಲ್ಲಿ ಸಿಗುವ ಒಂದೇ ಒಂದು ಸುಳಿವು ಎಗ್ಸೆಲ್ ಮಾಫಿಯಾದತ್ತ ಲೀಡ್ ಕೊಡುತ್ತದೆ. ಅಲ್ಲಿಂದ ಮುಂದೆ ಏನೇನಾಗುತ್ತದೆ ಎಂಬುದು ಪ್ರೇಕ್ಷಕರನ್ನು ಆಸನದ ಅಂಚಿಗೆ ತಂದು ಕೂರಿಸಿ ನೋಡಿಸಿಕೊಂಡುಹೋಗುತ್ತದೆ. ಒಟ್ಟಿನಲ್ಲಿ ನಾಯಕ ‘ಎಗ್ಸೆಲ್’ ಮಾಫಿಯಾದ ‘ಸೈಟ್’ ಪತ್ತೆ ಮಾಡಿ ‘ಜಂಟಲ್ವುನ್’ ಎನಿಸಿಕೊಳ್ಳುವ ‘ಎಗ್’ಸೈಟಿಂಗ್ ಕಥಾಹಂದರದ ಈ ಸಿನಿಮಾ ‘ಎಗ್’ಸೆಲೆಂಟ್.
| ರವಿಕಾಂತ ಕುಂದಾಪುರ ಬೆಂಗಳೂರು