ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ಗಳ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆಯುವಲ್ಲಿ ತಮಿಳು ನಟ ವಿಜಯ್ ಸಹ ಒಬ್ಬರು. ವಿಜಯ್, 'ಮಾಸ್ಟರ್' ಚಿತ್ರಕ್ಕೆ 80 ಕೋಟಿ ರೂ. ಸಂಭಾವನೆ ಪಡೆದ ಸುದ್ದಿ ಇತ್ತು. ಈಗ ಅವರು ತಮ್ಮ ಹೊಸ ಚಿತ್ರ 'ವಾರಿಸು'ಗೆ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಬಿಸಿಬಿಸಿ ಚರ್ಚೆ ಕಾಲಿವುಡ್ನಲ್ಲಿ ಜೋರಾಗಿ ನಡೆಯುತ್ತಿದೆ.
ವಿಜಯ್ ಅಭಿನಯದ 'ವಾರಿಸು' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಈ ಚಿತ್ರಕ್ಕೆ ವಿಜಯ್ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಚರ್ಚೆ ನಡೆಯುತ್ತಿದ್ದು, ಅದಕ್ಕೆ ಈಗ ಉತ್ತರ ಸಿಕ್ಕಿದೆ.
ಮೂಲಗಳ ಪ್ರಕಾರ, 'ವಾರಿಸು' ಚಿತ್ರದ ಬಜೆಟ್ 200 ಕೋಟಿಯಷ್ಟಾಗಿದ್ದು, ಅದರಲ್ಲಿ ವಿಜಯ್ ಅವರ ಸಂಭಾವನೆಯೇ ಅರ್ಧದಷ್ಟಿದೆಯಂತೆ. ಅಂದರೆ, ಈ ಚಿತ್ರದಲ್ಲಿ ನಟಿಸುವುದಕ್ಕೆ ವಿಜಯ್ ಅಂದಾಜು 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು, ಏಕಕಾಲಕ್ಕೆ ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗಿ ಬಿಡುಡೆಯಾಗುತ್ತಿದೆ. ಅದೇ ಕಾರಣಕ್ಕೆ, ಈ ಚಿತ್ರಕ್ಕೆ ತಮ್ಮ ಸಂಭಾವನೆಯನ್ನು ವಿಜಯ್ ಏರಿಸಿದ್ದಾರಂತೆ.
'ವಾರಿಸು' ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಿಸಿದ್ದು, ವಂಶಿ ಪಡೈಪಲ್ಲಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ವಿಜಯ್ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಮಿಕ್ಕಂತೆ ರಮ್ಯಾ ಕೃಷ್ಣ, ಪ್ರಭು, ಶರತ್ ಕುಮಾರ್, ಪ್ರಕಾಶ್ ರೈ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.